ಕತ್ತಲೆ ರಾಕ್ಷಸರಿಗೆ ಬೆಳಕು

scan0002

ಹಿರಿಯ ವಿದ್ವಾಂಸರಾದ ಎಲ್. ಬಸವರಾಜು ಬರೆದ ತಾತ್ವಿಕ ಚಿಂತನೆಗಳನ್ನು ಇಲ್ಲಿನ ಪುಟ್ಟ ಬರಹಗಳು ಒಳಗೊಂಡಿವೆ. ಸುಮಾರು ೧೭೦ ಬರಹಗಳನ್ನು ಒಳಗೊಂಡಿರುವ ಈ ಪುಸ್ತಕ ಬದುಕು ಹಾಗೂ ಜಗತ್ತಿನ ಕುರಿತಾಗಿ ತಾತ್ವಿಕವಾಗಿ ಚಿಂತಿಸುತ್ತದೆ ಮತ್ತು ಓದಿದವರನ್ನು ಯೋಚನೆಗೆ ಹಚ್ಚುತ್ತದೆ. ಇಲ್ಲೆಲ್ಲ ಎಲ್.ಬಿ. ಅವರ ಅಗಾಧ ಪಾಂಡಿತ್ಯ, ಜೀವನಾನುಭವ ತಿಳಿಜಲದಂತೆ ಪ್ರವಹಿಸುವುದನ್ನು ಕಾಣಬಹುದು.

ಇಲ್ಲಿ ಲೇಖಕರು ಮುಟ್ಟದ ವಿಷಯವೇ ಇಲ್ಲ ಎನ್ನಬಹುದು. ಪ್ರೀತಿಯಿಂದ, ಯೋಗದವರೆಗೆ, ಚಟದಿಂದ ದೇವರ ಬಗ್ಗೆ, ಅಂಬಿಗನಿಂದ ಬುದ್ಧನವರೆಗೆ ಅವರು ಚಿಂತನೆಯ ಒರೆಗೆ ಹಚ್ಚದ ವಿಷಯವೇ ಇಲ್ಲ. ಸಾಮಾನ್ಯ ಓದುಗರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಬರಹವಾದ್ದರಿಂದ ತೀರ ಸರಳವಾದ ವರ್ತಮಾನದ ಬಳಕೆಯ ಭಾಷೆ ಇಲ್ಲಿನ ಬರಹಗಳಿಗೆ ದೊರಕಿದೆ. ಬದುಕಿನ ಅನೇಕ ಸಂಗತಿಗಳು ಲೋಕಜ್ಞಾನವಾಗಿ ಓದುಗರನ್ನು ಮುಟ್ಟುವಂತಿದೆ. ಹಾಗಾಗಿ ಅವು ಎಲ್ಲರನ್ನೂ ಸೆಳೆಯುವ, ಉಳಿಯುವ ಗುಣವನ್ನು ಪಡೆದಿದೆ. ಅಂದಹಾಗೆ, ಈ ಬರಹಗಳು ಈಗಾಗಲೇ `ಪ್ರಜಾವಾಣಿ’ಯ `ಬಾಳಬುತ್ತಿ’, `ಅರಿವಿನ ಅಂತರಾಳ’ ಅಂಕಣಗಳಲ್ಲಿ ಪ್ರಕಟವಾಗಿ ಓದುಗರ ಮೆಚ್ಚುಗೆಯನ್ನು ಪಡೆದಿವೆ.
ಶೀರ್ಷಿಕೆ:ಕತ್ತಲೆ ರಾಕ್ಷಸರಿಗೆ ಬೆಳಕು (ತಾತ್ವಿಕ ಚಿಂತನ ಬರಹಗಳು) ಲೇಖಕರು:ಡಾ. ಎಲ್. ಬಸವರಾಜು ಪ್ರಕಾಶನ: ರೂಪ ಪ್ರಕಾಶನ ಪುಟಗಳು: 320 ಬೆಲೆ:ರೂ.200/-

 

 

 

ಕೃಪೆ : ಪ್ರಜಾವಾಣಿ

 

 

ಸೃಜನೆಯ ಮೂಡು

scan0025

ಪ್ರೀತಿ ಶುಭಚಂದ್ರ ತಮ್ಮ ವಿಮರ್ಶಾ ಬರಹಗಳನ್ನು ಈ ಪುಸ್ತಕದಲ್ಲಿ ಸಂಕಲಿಸಿದ್ದಾರೆ. ಸೃಷ್ಟಿಕ್ರಿಯೆಯ ಹುಟ್ಟನ್ನು ಕವಿ ಬೇಂದ್ರೆ `ಸೃಜನದ ಮೂಡುಎಂದು ಕರೆದಿದ್ದಾರೆ. ಅದು ಲೇಖಕಿಯ ಸೃಷ್ಟಿಯ ನಿರಂತತೆಯ ಕಾರಣದಿಂದಾಗಿ ತಮ್ಮ ಪುಸ್ತಕಕ್ಕೆ ಈ ಹೆಸರನ್ನು ಅವರು ನೀಡಿದ್ದಾರೆ.

ಇಲ್ಲಿನ ಲೇಖನಗಳ ಹಾಗೂ ಅಧ್ಯಯನದ ವ್ಯಾಪ್ತಿ ವಿಸ್ತಾರವಾಗಿದೆ. ಜನಪದ ಸಾಹಿತ್ಯ, ವಡ್ಡಾರಾಧನೆ, ಬೇಂದ್ರೆ ಕಾವ್ಯ, ಜೈನ ಸಾಹಿತ್ಯ, ಬಂಧುವರ್ಮ- ಹೀಗೆ ವೈವಿಧ್ಯಮಯವಾದ ಲೇಖನಗಳು ಇಲ್ಲಿವೆ. ಸಹಜವಾಗಿ ಲೇಖಕಿ ಸ್ತ್ರೀವಾದಿ ದೃಷ್ಟಿಕೋನದಿಂದ ನೋಡಿರುವುದರಿಂದ ಬಹುಪಾಲು ಲೇಖನಗಳಲ್ಲಿ ಮಹಿಳೆಯರು, ಅವರ ಕುರಿತ ಚಿಂತನೆಯೇ ಕೇಂದ್ರವಾಗಿದೆ. ಉದಾಹರಣೆಗೆ ಅವರ ಒಳನೋಟವೊಂದನ್ನು ಇಲ್ಲಿ ಗಮನಿಸಬಹುದು.

`ಸ್ತ್ರೀ ವಿರೋಧಿ ದೋರಣೆಗಳು ಬಹಳ ಸೂಕ್ಷ್ಮವಾಗಿ ನಮ್ಮ ದಿನಬಳಕೆಯ ಭಾಷಾ ವಾಪಾರದಲ್ಲಿ ಕಾಣಿಸಿಕೊಳ್ಳುತ್ತದೆ. ಸ್ತ್ರೀ ಪುರುಷ ಸಂಬಂಧವನ್ನು ಸ್ಥಿರೀಕರಿಸುವ ಕೆಲ ಸಿದ್ಧ ಉಪಮೆ, ರೂಪಕಗಳ ಬಳಕೆ ನಮ್ಮಲ್ಲಿ ಇದೆ; ಹೂ-ದುಂಬಿ, ನದಿ-ಸಾಗರ, ವೀಣೆ-ವೈಣಿಕ, ಲತೆ-ಮರ, ಮಲ್ಲಿಗೆ-ಮಾಮರ, ಇತ್ಯಾದಿ. ಈ ಹೋಲಿಕೆಗಳ ಸೌಂದರ್ಯಾತ್ಮಕ ಉಪಯುಕ್ತತೆಗಿಂತ ಸ್ತ್ರೀಯನ್ನು ಅಸಮಾನತೆಯ ನೆಲೆಗೆ ದೂಡುವಲ್ಲಿ ಅವು ವಹಿಸುವ ಪಾತ್ರ ಗಮನಾರ್ಹವಾದುದು.‘ (ಮಲ್ಲಿಗೀ… ನೀ ಹೊರಟಿದ್ದೀಗ ಎಲ್ಲಿಗೀ…/ಪು.356) ಎನ್ನುತ್ತಾರೆ. ಇಂಥ ಒಳನೋಟಗಳು ಪುಸ್ತಕದ ಉದ್ದಕ್ಕೂ ಕಾಣಸಿಗುತ್ತದೆ. ಆದರೆ ಅವರು ಮಾಡಿರುವ ಕೆಲವು ಸ್ತ್ರೀವಾದಿ ಚರ್ಚೆಗಳು ಈಗಾಗಲೇ ಕನ್ನಡ ಸಾಹಿತ್ಯದಲ್ಲಿ ಬಂದು ಹೋಗಿರುವಂಥದು. ಸ್ತ್ರೀವಾದಿ ಚರ್ಚೆಗಳು ಈಗಾಗಲೇ ಕನ್ನಡ ಸಾಹಿತ್ಯದಲ್ಲಿ ಬಂದು ಹೋಗಿರುವಂಥದು. ಸ್ತ್ರೀವಾದಿ ಅಧ್ಯಯನದ ದೃಷ್ಟಿಯಿಂದ ಗಮನಿಸಬಹುದಾದ ಪುಸ್ತಕವಿದು.

ಶೀರ್ಷಿಕೆ: ಸೃಜನೆಯ ಮೂಡು ಲೇಖಕರು: ಪ್ರೀತಿ ಶುಭಚಂದ್ರ ಪ್ರಕಾಶಕರು: ರೂಪ ಪ್ರಕಾಶನ ಪುಟಗಳು :368 ಬೆಲೆ:ರೂ.185/-

ಕೃಪೆ : ಪ್ರಜಾವಾಣಿ