ಬುದ್ಧ ಧರ್ಮ: ಬ್ರಾಹ್ಮಣಶಾಹಿಯ ಇನ್ನೊಂದು ಮುಖ!

ಮಹಾರಾಷ್ಟ್ರದ ಕಾರ್ಮಿಕ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಂಝಗಿರಿಯವರು ತತ್ವಜ್ಞಾನ ವಿಷಯದಲ್ಲಿ ತೀವ್ರ ಆಸಕ್ತಿ ಕೊಂದಿದ್ದರೆನ್ನಲು ಈ ಪುಸ್ತಕ ಸಾಕ್ಷಿಯಾಗಿದೆ. ಕಾರ್ಮಿಕ ಹೋರಾಟಗಳಲ್ಲಿ ನಿರತರಾವಿರುವ ಅನೇಕ ಮುಖಂಡರು ಸಂಬಳ ತುಟ್ಟಿಭತ್ಯೆ ಹೆಚ್ಚಳ, ಲಾಕ್ ಔಟ್ ಇತ್ಯಾದಿ ವಿಷಯಗಳಲ್ಲೆ ಮುಳುಗಿರುವುದು ಸಾಮಾನ್ಯ. ಕಾರ್ಮಿಕ ಹೋರಾಟಗಳಲ್ಲಿ ತಾತ್ವಿಕ ವಿಚಾರಧಾರೆಯವರನ್ನು `ಇಂಪ್ರಾಕ್ಟಿಕಲ್ ವ್ಯಕ್ತಿ ಎನ್ನುವಂತೆ ನೋಡುವ ಧೋರಣೆಯೇ ಹೆಚ್ಚು.

ಮುನ್ನಡಿಯಲ್ಲಿ ನಾಯರ‍್ ಅವರು – “ನಾನು ಇದನ್ನು ಒಂದು ಶಾಸ್ತ್ರೀಯ ಕೃತಿ ಎಂದು ಪರಿಗಣಿಸುತ್ತೇನೆ . . . ಏಕೆಂದರೆ ಭಾರತೀಯ ತತ್ವಶಾಸ್ತ್ರದ ಭೌತವಾದದಂತಿರುವ `ಪೂರ್ವಮೀಮಾಂಸೆ‘, `ಮೀಮಾಂಸೆ‘.,`ವೇದಾಂತ ಮುಂತಾದುವನ್ನು ಯುರೋಪಿಯನ್ ಅಂತಿಮವಾಗಿ ಮಾರ್ಕ್ಸ್‌ವಾದಿ ಪರಿಕಲ್ಪನೆಗಳೊಂದಿಗೆ ಜೋಡಿಸುವ ಬೇರೆ ಯಾವುದೇ ಕೃತಿಯನ್ನು ನಾನಿನ್ನೂ ಕಂಡಿಲ್ಲ. . .“(ಪು.7) ಎಂದು ಬರೆಯುತ್ತಾರೆ. ಈ ಮಾತುಗಳು ಉತ್ಪ್ರೇಕ್ಷಣೀಯವೆನಿಸುತ್ತದೆ. ಏಕೆಂದರೆ ಸ್ವತಃ ಸಂಝಗಿರಿಯವರು ತಮ್ಮ ಇತಿಮಿತಿಗಳನ್ನು ಈ ಕೆಳಗಿನಂತೆ ಹೇಳಿಕೊಳ್ಳುತ್ತಾರೆ:

ನಾನು ವಿಜ್ಞಾನದ ವಿದ್ಯಾರ್ಥಿ ಆದರೆ ಸ್ವತಃ ವಿಜ್ಞಾನಿಯಲ್ಲ. ನಾನು ತತ್ವಶಾಸ್ತ್ರದ ಅಧ್ಯಯನಕಾರ, ಆದರೆ ಸ್ವತಃ ತತ್ವ ಪಂಡಿತನಲ್ಲ. ಕಾರ್ಮಿಕರಿಗೆ, ರೈತರಿಗೆ . . . ಈ ವಿಷಯದಲ್ಲಿ ಏನು ಎಷ್ಟು ಬೇಕು ಎನ್ನುವುದನ್ನು ಪರಿಗಣಿಸಿ ವಿಷಯ ವ್ಯಾಪ್ತಿಯನ್ನು ಸೀಮಿತಗೊಳಿಸಿದ್ದೇನೆ. ಮಹಾಪಂಡಿತ ರಾಹುಲ ಸಾಂಕೃತ್ಯಾಯನ, ಡಾ.ದಾಮೋದರ ಕೊಸಾಂಬಿ ಮತ್ತು ಡಾ. ದೇವಿಪ್ರಸಾದ್ ಚಟ್ಟೋಪದ್ಯಾಯ ಇವರ ಮಾರ್ಗದರ್ಶನವನ್ನು ಸ್ವೀಕರಿಸಿದ್ದೇನೆ. . . ಇದರಲ್ಲಿ ಏನಾದರೂ ನ್ಯೂನ್ಯತೆಗಳಿದ್ದರೆ ಅದಕ್ಕೆ ನಾನು ಹೊಣೆ.(ಪು.13) ಎಂದು ತಮ್ಮ ವಿನಯಪೂರ್ವಕ ಮಾತುಗಳನ್ನು ಹೇಳಿದ್ದಾರೆ.

ಅದೇ ರೀತಿ ಪೂರ್ವಮೀಮಾಂಸೆ, ವೈಶೇಷಿಕ ಮುಂತಾದ ದರ್ಶನಗಳ ಒಳಗಿನ ಭೌತವಾದವನ್ನು ದೇವೀಪ್ರಸಾದರು ಪರಿಶೀಲಿಸಿದ್ದಾರೆಂದು ಸಂಝಗಿರಿಯವರೇ ಹೇಳುತ್ತಾರೆ. (ಪು.61, ಪ್ಯಾ.-1).

ಇದೇ ಥರದಲ್ಲಿ, ಎಸ್.ಜಿ.ಸರ‍್ ದೇಸಾಯಿ ಮತ್ತಿತರ ಎಡಚಳುವಳಿಗಾರರಿಂದ ಭಾರತೀಯ ತತ್ವಜ್ಞಾನದ ಬಗ್ಗೆ ಪುಸ್ತಕಗಳು ಬಂದಿವೆ. ಆದರೆ ಸಂಝಗಿರಿಯವರಂತೆ – ಸಾಂಕೃತ್ಯಾಯನ, ಕೊಸಾಂಬಿ, ಚಟ್ಟೋಪದ್ಯಾಯರುಗಳ ಸಂಶೋಧನೆಗಳ ಬಗ್ಗೆ ಋಣಸ್ಮರಣೆ ಮಾಡಿಕೊಳ್ಳುವುದು ಎದು ಕಾಣಿಸುವುದಿಲ್ಲ.

ನೂರ ಇಪ್ಪತ್ತೈದು ಪುಟಗಳ ಈ ಪುಸ್ತಕದಲ್ಲಿಯ ವಿಷಯಗಳು – ವೈಜ್ಞಾನಿಕ ಮನೋಭಾವ, ತತ್ವಶಾಸ್ತ್ರದಲ್ಲಿಯ ಸಂಘರ್ಷ, ಪ್ರಾಚೀನ ಭೌತಿಕವಾದಗಳಿಂದ ಆರಂಭಗೊಂಡು ಮಾರ್ಕ್ಸ್‌ನ ದ್ವಂದ್ವಮಾನ ಭೌತಿಕವಾದದವರೆಗೆ ಹರಡಿಕೊಂಡಿವೆ. ಚಾರ್ವಾಕ, ಬುದ್ಧರ ಚಿಂತನೆಗಳು ಚರ್ಚೆಗೊಳಪಟ್ಟಿವೆ. ಯುರೋಪ್ ವೈಜ್ಞಾನಿಕ ಯುಗದ ದೆಕಾರ್ತ್, ಲಾಕ್, ಬರ್ಕಲೆ, ಹ್ಯೂಮ್, ಕಾಂಟ್, ಹೆಗೆಲ್ ಮುಂತಾದ ತತ್ವಜ್ಞಾನಿಗಳ ವಿಚಾರಗಳನ್ನು ಚರ್ಚಿಸಲಾಗಿದೆ.

`

 

ವರ್ಣವಿಷಯತೆಗೆ ವಿರೋಧ ಎನ್ನುವ ಅಧ್ಯಾಯದಲ್ಲಿ … ಭಾರತೀಯ ಚಿಂತನ ಪರಂಪರೆಯಲ್ಲಿ ಬಹಳಷ್ಟು ದರ್ಶನಗಳು ದೇವರ ಅಸ್ತಿತ್ವವನ್ನು ಒಪ್ಪುವುದಿಲ್ಲ… ಬುದ್ಧನು ಸ್ವತಃ ನಿರೀಶ್ವರದಾರಿಯಾಗಿದ್ದ . . . ಅದೇ ಕಥೆ ಜೈನ ತತ್ವಜ್ಞಾನದ್ದು. ನಾಸ್ತಿಕವೆನಿಸಿದ ಈ ಮೂರೂ ಸಂಪ್ರದಾಯಗಳ ನಿಲುವು ದೇವರನ್ನು ನಿರಾಕರಿಸುವಂತಹದು”. (ಪು.43) ಎಂದು ಬರೆಯುತ್ತಾರೆ.

ಆದರೆ ಭಾರತೀಯ ತತ್ವಜ್ಞಾನ ಪರಂಪರೆಯಲ್ಲಿ ಆಸ್ತಿಕ ಮತ್ತು ನಾಸ್ತಿಕ ಎಂದು ಗುರುತಿಸುವುದು ದೇವರ ನಂಬಿಕೆ ಮತ್ತು ಅಪನಂಬಿಕೆಯ ಆಧಾರದಲ್ಲಿ ಅಲ್ಲ. ಬದಲಿಗೆ ವೇದಪ್ರಾಮಾಣ್ಯವನ್ನು ಒಪ್ಪುವ ಮತಗಳನ್ನು ಆಸ್ತಿಕ ಮತಗಳೆಂತಲೂ ಒಪ್ಪಲಾರದ ಮತಗಳನ್ನು ನಾಸ್ತಿಕ ಮತಗಳೆಂತಲೂ ಗುರುತಿಸಲಾಗುತ್ತದೆ. ಈ ಕುರಿತು ದೇವೀ ಪ್ರಸಾದ್ ಚಟ್ಟೋಪದ್ಯಾಯರು `ಇಂಡಿಯನ್ ಅಥೇಯಿಜಂಎನ್ನುವ ಪುಸ್ತಕದಲ್ಲಿ ಕೂಲಂಕುಶವಾಗಿ ವಿಶ್ಲೇಷಣೆ ಮಾಡಿದ್ದಾರೆ ಎಂದು ಹೇಳಲು ಬಯಸುತ್ತೇನೆ.

ಲೇಖಕರು ಬುದ್ಧನ ಚಿಂತನೆ, ಉಪದೇಶಗಳು ವರ್ಣ ಮತ್ತು ಜಾತಿವ್ಯವಸ್ಥೆಗೆ ವಿರುದ್ಧವಾಗಿದ್ದವು ಎಂದು ವಾದಿಸುತ್ತಾರೆ. ಬಹುತೇಕ ಉದಾರವಾದಿ ಎಡಚಿಂತಕರೂ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ. ಅದೇ ಕಾರಣಕ್ಕಾಗಿ ಅಂಬೇಡ್ಕರ‍್ ಸಹ ಬೌದ್ಧ ಧರ್ಮಕ್ಕೆ ಮಾರುಹೊದದ್ದು.

ಈ ಸಂದರ್ಭದಲ್ಲಿ ಖ್ಯಾತ ಇತಿಹಾಸಕಾರ ಇರ್ಫಾನ್ ಹಬೀಬ್ ಅವರು ತಮ್ಮ `Caste & Money in Indian History’ ಎನ್ನುವ ಗ್ರಂಥದಲ್ಲಿ ಬೌದ್ಧ ಧರ್ಮದ ತತ್ವಗಳು ಕೃಷಿಕರು, ಬುಡಕಟ್ಟು ಮತ್ತು ಕಾಡುಜನಗಳನ್ನು ದಮನಿಸುವುದಕ್ಕೆ ತಾತ್ವಿಕ ಸಮರ್ಥನೆ ನೀಡಿದವು ಎಂದು ಸಂಶೋಧನೆ ನಡೆಸಿದ್ದಾರೆ.

ಇರ್ಫಾನ್ ಹಬೀಬ್ ಹೀಗೆ ಹೇಳುತ್ತಾರೆ: “. . . . ಬೌದ್ಧಧರ್ಮವು ಜಾತಿವ್ಯವಸ್ಥೆಯ ಬೆಳವಣಿಗೆಗೆ ತನ್ನದೇ ಸ್ವಂತ ಸಂಭಾವನೆಯನ್ನೇನೂ ನೀಡಿರಲಿಲ್ಲವೆ ಎಂದು ಕೇಳಬಹುದು. ಕರ್ಮ ಸಿದ್ಧಾಂತ ಅಥವಾ ಆತ್ಮಗಳ ದೇಹಾಂತರ ಪ್ರಾಪ್ತಿಯಲ್ಲಿ ನಂಬಿಕೆ – ಇದು ಬೌದ್ಧತತ್ವಜ್ಞಾನದ ಆದಾರಶಿಲೆಯೆಂದು ನಾವು ಪರಿಗಣಿಸಬಹುದು; ಈ ಸಿದ್ಧಾಂತ ಅಥವಾ ನಂಬಿಕೆ, ಜಾತಿ ವ್ಯವಸ್ಥೆಯನ್ನು ವೈಚಾರಿಕವಾಗಿ ತರ್ಕಬದ್ಧಗೊಳಿಸುವಂತಹ ಒಂದು ಸಿದ್ಧಾಂತ ಅಥವಾ ನಂಬಿಕೆಯಾಗಿದೆ…

ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳನ್ನು ಕೊಲ್ಲುವುದು ತಪ್ಪೆನ್ನುವ ತತ್ವವು ಪಶುಪಾಲಕರಾದ ವೈಶ್ಯರ ನಡುವೆ ಸ್ವಾಭಾವಿಕವಾಗಿ ಜನಪ್ರಿಯವಾಯಿತೆಂಬುದೇ ಕೊಸಾಂಬಿಯವರ ಪ್ರತಿಪಾದನೆಯ ಇಂಗಿತವಾಗಿದೆ. ಆದರೆ `ಅಹಿಂಸೆ ಜನಪ್ರಿಯ ಸಿದ್ಧಾಂತವಾಗುವುದಕ್ಕೆ ಹೆಚ್ಚು ವಿಶ್ವಾಸಾರ್ಹವಾದ ಬೇರೆ ಕಾರಣವೊಂದನ್ನು ನಾನಿಲ್ಲಿ ಗೌರವಪೂರ್ವಕವಾಗಿ ಮುಂದಿಡಲು ಅಪೇಕ್ಷಿಸುತ್ತೇನೆ. ಅದು-ಆಹಾರ ಸಂಗ್ರಹಕಾರ ಸಮುದಾಯಗಳನ್ನು ದಮನಿಸುವುದಕ್ಕೂ ಅಪಮಾನಿಸುವುದಕ್ಕೂ ಕಾರಣವನ್ನೊದಗಿಸಿತು. ಅಶೋಕನ ಘೋಷಣೆಗಳು ಬೇಟೆ ಮತ್ತು ಮೀನುಗಾರಿಕೆಗಳನ್ನು ಖಂಡಿಸಿವೆ. . . ನಿಜವಾಗಿ ನೋಡಿದರೆ, ಇಲ್ಲಿ ವರ್ಣ ಸಂರಚನೆಯೊಳಗೆ ಕೃಷಿಕ ಸಮುದಾಯದ ಸ್ಥಾನವನ್ನು ಕೆಳಗೊತ್ತುವುದರಲ್ಲಿ ಬೌದ್ಧ ಧರ್ಮದ ಕೊಡುಗೆ ಕೂಡ ನಗಣ್ಯವೇನಲ್ಲ… ನೇಗಿಲಿನ ಕಬ್ಬಣದ ಗಳವು ಭೂಮಿಯಲ್ಲಿರುವ ಜೀವಿಗಳಿಗೆ ಸಾವು-ನೋವುಗಳನ್ನು ಉಂಟುಮಾಡುತ್ತದೆಯೆಂಬ ಕಾರಣಕ್ಕೆ ಮನುಸ್ಮೃತಿ ಕೃಷಿಯಲ್ಲಿ ನೇಗಿಲಿನ ಬಳಕೆಯನ್ನು ಖಂಡಿಸುತ್ತದೆ. ಬೌದ್ಧ ಬಿಕ್ಷುಗಳು ಕೃಷಿ ಮಾಡಬಾರದೆಂದು ಬುದ್ಧ ನಿಷೇಧ ಹೇರಿದ್ದುದಾಗಿ ಐಕ್ಸಿಂಗ್ ಹೇಳಿದ್ದಾನೆ. ಬೌದ್ಧ ಧರ್ಮ ಮೇಲೆದ್ದ ಕಾಲದಿಂದ ಅಂದರೆ ಕ್ರಿ.ಪೂ. 500 ದಿಂದ ಕ್ರಿ.ಶ. 5ನೇ ಶತಮಾನದವರೆಗಿನ ಕಾಲಾವಧಿಯು ಭಾರತೀಯ ಜಾತಿವ್ಯವಸ್ಥೆ ಹಾಗೂ ಅದನ್ನು ಸಮರ್ಥಿಸುವ ತಾತ್ವಿಕ ದೃಷ್ಟಿಕೋನ ರೂಪ ತಳೆದ ಕಾಲಾವಧಿ ಎನ್ನಬಹುದು.”

ಈ ಮೇಲಿನ ವಿಶ್ಲೇಷಣೆಯಲ್ಲಿ ಇರ್ಫಾನ್ ಹಬೀಬ್ ಅವರು ಬುದ್ಧ ಧರ್ಮದ ತತ್ವಗಳ ಬಗ್ಗೆ ಹೆಚ್ಚು ತರ್ಕಬದ್ಧ ವಾದ ಮಂಡಿಸಿದ್ದಾರೆ. ಅದೇ ರೀತಿ `ಬೌದ್ಧಧರ್ಮ ಬ್ರಾಹ್ಮಣಶಾಹಿಯ ಇನ್ನೊಂದು ಮುಖವಾಗಿ ಹೇಗೆ ಉದ್ಭವವಾಯಿತು ಎಂದು ಸಮರ್ಪಕವಾಗಿ ವಿಶ್ಲೇಷಣೆ ಮಾಡಿದ್ದಾರೆ.

ಸಂಝಗಿರಿಯವರು, ಕುಟುಂಬ ವ್ಯವಸ್ಥೆ ಉದ್ಭವಿಸಿ ಹೆಣ್ಣಿನ ಸ್ಥಾನ ಕುಸಿಯಿತು ಎಂದು ವಾದಿಸುತ್ತಾರೆ. ವಿವಾಹ ಸಂಸ್ಥೆಯು ಅನಾದಿಯಲ್ಲ. ಅದು ಅಸ್ತಿತ್ವಕ್ಕೆ ಬರುವ ಮುನ್ನ ಲೈಂಗಿಕ ಸಂಬಂಧದ ಮೇಲೆ ಅಂಥ ನಿರ್ಬಂಧನೆಯಿರಲಿಲ್ಲ. ಹೆಣ್ಣಿನ ಸ್ಥಾನ ಹೀನಾಯವೂ ಆಗಿರಲಿಲ್ಲ . . .” (ಪು.50) ಎಂದು ಬರೆಯುತ್ತಾರೆ.

ಅನೇಕ ಸ್ತ್ರೀವಾದಿಗಳು ಏಕಪತಿ-ಏಕಪತ್ನಿ ವ್ಯವಸ್ಥೆ ಪುರುಷನಿಂದ ಹೇರಲ್ಪಟ್ಟಿದ್ದು ಎನ್ನುವ ತಪ್ಪು ಕಲ್ಪನೆಯ ವಾದಗಳನ್ನು ಮಾಡುವಂತೆಯೇ ಸಂಝಗಿರಿಯವರೂ ಸಹ ಇಲ್ಲಿ ಮಾಡಿದ್ದರೆ.

ಆದರೆ ಎಂಗೆಲ್ಸ್, `ಕುಟುಂಬ, ಖಾಸಗಿ ಆಸ್ತಿ ಹಾಗೂ ರಾಜ್ಯಇವುಗಳ ಉಗಮ ಎನ್ನುವ ಮಹಾನ್ ಕೃತಿಯಲ್ಲಿ ಏಕಪತಿ ಮತ್ತು ಏಕಪತ್ನಿ ಕುಟುಂಬ ವ್ಯವಸ್ಥೆಗೆ ಮೊದಲು ಹಾತೊರೆದವಳು ಸ್ತ್ರೀ ಎಂದು ವಿಶ್ಲೇಷಿಸಿದ್ದಾರೆ.

ಎಂಗೆಲ್ಸ್ ಹೀಗೆ ಹೇಳುತ್ತಾನೆ : “. . . . ಹಳೆಯ ಪಾರಂಪರಿಕ ಲೈಂಗಿಕ ಸಂಬಂಧಗಳು ತಮ್ಮ ಋಜುವಾದ ಒರಟಾದ ಸ್ವಭಾವವನ್ನು ಹೆಚ್ಚು ಹೆಚ್ಚು ಕಳೆದುಕೊಂಡಂತೆ, ಅವು ಸ್ತ್ರೀಯರಿಗೆ ಅಷ್ಟೂ ಹೆಚ್ಚು ಹೀನಾಯಕರವಾಗಿ ಪೀಡಕವಾಗಿ ಕಂಡುಬಂದಿರಬೇಕು; ಅವರು ಸತೀತ್ವ ಹಕ್ಕಿಗಾಗಿ ಮುಕ್ತಿಮಾರ್ಗವಾಗಿ ಒಬ್ಬನೇ ವೃಕ್ತಿಯೊಂದಿಗೆ ತಾತ್ಕಾಲಿಕವಾಗಿಯೋ ಶಾಶ್ವತವಾಗಿಯೋ ವಿವಾಹವಾಗುವುದಕ್ಕಾಗಿ ಅಷ್ಟೂ ಹೆಚ್ಚು ತೀವ್ರತೆಯೊಂದಿಗೆ ಹಂಬಲಿಸಿರಬೇಕು. ಈ ಮುನ್ನಡೆಗೆ ಪುರುಷನು ಕಾರಣರಾಗಿರಲು ಸಾಧ್ಯವಿರಲಿಲ್ಲ, ಏಕೆಂದರೆ ಅವರು ಎಂದೂ ಸಮೂಹ ವಿವಾಹದ ಸುಖವನ್ನು ಬಿಟ್ಟುಕೊಡಲು ಕನಸಿನಲ್ಲಿ ಕೂಡಾ ಸಿದ್ಧವಿರಲಿಲ್ಲ, ಇಂದೂ ಸಹ ಸಿದ್ಧವಿಲ್ಲ. ಸ್ತ್ರೀಯರು ಯುಗ್ಮ ವಿವಾಹದ ಪದ್ಧತಿಗೆ ಪರಿವರ್ತನೆಯನ್ನು ಜಾರಿಗೆ ತಂದನಂತರವಷ್ಟೇ ಪುರುಷರು ಕಟ್ಟುನಿಟ್ಟಾದ ಒಮ್ಮದುವೆಯ ಪದ್ಧತಿಯನ್ನು ಜಾರಿಗೆ ತಂದರು. ಅದೂ ಮಹಿಳೆಯರಿಗೆ ಮಾತ್ರ ಅನ್ವಯಿಸುವಂತೆ, ಎನ್ನಿ.”(ಪು.77).

ಇನ್ನೊಂದೆಡೆ ಸಂಝಗಿರಿಯವರು, ಮಾರ್ಕ್ಸ್‌ವಾದೀ ದೃಷ್ಟಿಕೋನಕ್ಕೆ ವಿರುದ್ಧವಾಗಿ ಮಾನವನ ಬುದ್ಧಿ ಬೆಳವಣಿಗೆಯನ್ನು ವಿಶ್ಲೇಷಿಸುತ್ತಾರೆ.

ಬುದ್ಧಿಮತ್ತೆಯು ಕೇವಲ ಮೆದುಳಿಗೆ ಸಂಬಂಧಿಸಿದ್ದು ಎನ್ನುವ ತಿಳುವಳಿಕೆ ಭೌತವಾದಿ ದೃಷ್ಟಿಕೋನವಾಗುವುದಿಲ್ಲ. ಉತ್ಪಾದನಾಶಕ್ತಿಗಳ ಬೆಳವಣಿಗೆಯನ್ನು ಆಧರಿಸಿ ಮಾನವನ ಚಿಂತನೆಯ ಮಟ್ಟ ನಿರ್ಧಾರಗೊಳ್ಳುತ್ತ ಸಾಗುತ್ತದೆ ಎನ್ನುವುದು ಮಾರ್ಕ್ಸ್‌ನ ತತ್ವವಾಗಿದೆ. ಇತರ ಪ್ರಾಣಿಗಳಿಗಿಂತ ಮಾನವನ ಮೆದುಳು ಭಿನ್ನ ರೀತಿಯಲ್ಲಿ ವಿಕಾಸಗೊಳ್ಳಲು ಸಾಧ್ಯವಾದದ್ದು ಅವನು ಶ್ರಮಹಾಕುವ ಜೀವಿಯಾಗಿ ಮಾರ್ಪಟ್ಟ ಕಾರಣದಿಂದ. ಮಾನವನ ಶ್ರಮ, ಅವನ ಕೈಕಾಲುಗಳಂತೆಯೇ ಅವನ ಮೆದುಳನ್ನೂ ವಿಕಾಸಗೊಳಿಸಿತು…

ಗಂಗಾಧರ ಕುಷ್ಟಗಿ 

ಶೀರ್ಷಿಕೆ: ಚಾರ್ವಾಕನಿಂದ ಮಾರ್ಕ್ಸ್‌ವರೆಗೆ ಲೇಖಕರು : ಪ್ರಭಾಕರ ಸಂಝಗಿರಿ (ಮರಾಠಿ ಮೂಲ) ಕನ್ನಡಕ್ಕೆ : ಚಂದ್ರಕಾಂತ ಪೋಕಳೆ ಪ್ರಕಾಶನ:ಕ್ರಿಯಾ ಪ್ರಕಾಶನ ಪುಟ. 128+4 ಬೆಲೆ:ರೂ.70/-

ಕೃಪೆ: ಲಂಕೇಶಪತ್ರಿಕೆ