ಅರಳಲೊಂದು ನಾಳೆ, ತೆರೆಯಿರಿಂದು ಹಾಳೆ – ಅಂಕಿತ ಟಾಪ್ 10

scan0014

1. ಮಾಯಾಲೋಕ  (ತೇಜಸ್ವಿ ಕೊನೇ ಕಾದಂಬರಿ):  ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ ಮೂಡಿಗೆರೆ, ಬೆಲೆ:ರೂ.೧೯೮/-
2. ಮೇಜರ‍್ ಸಂದೀಪ್ ಹತ್ಯೆ (ಮುಂಬೈ ಮಾರಣ ಹೋಮದ ಕಥೆ) : ರವಿ ಬೆಳಗೆರೆ, ಭಾವನಾ ಪ್ರಕಾಶನ, ಬೆಂಗಳೂರು, ಬೆಲೆ:ರೂ.೧೫೦/-
3. ಹೊಸ ತಲೆಮಾರಿನ ತಲ್ಲಣ : (ಯುವ ಲೇಖಕರ ಅನುಭವ, ಚಿಂತನೆ) ಸಂ:ರಹಮತ್ ತರಿಕೆರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬೆಲೆ:ರೂ.೮೦/-
4. ಅಂತರಂಗದ ಪಿಸುನುಡಿ (ಕಥಾ ಸಂಕಲನ): ವಸುಮತಿ ಉಡುಪ, ಅಂಕಿತ ಪುಸ್ತಕ, ಬೆಂಗಳೂರು ಬೆಲೆ:ರೂ.೧೨೦/-
5. ಕುಂತಿಯ ಅಂತರಾಳ (ಮಹಾಭಾರತದ ಮತ್ತೊಂದು ನೋಟ): ತಾರಾಮೂರ್ತಿ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು ಬೆಲೆ:ರೂ.೫೦/-
6. ಹಳ್ಳ ಬಂತು ಹಳ್ಳ (ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತ ಕಾದಂಬರಿ): ಶ್ರೀನಿವಾಸ ವೈದ್ಯ, ಮನೋಹರ ಗ್ರಂಥಮಾಲಾ, ಧಾರವಾಡ ಬೆಲೆ:ರೂ.೨೦೦/-
7. ಬತ್ತಿದ ಕೊಳವೆ ಬಾವಿಯಲ್ಲಿ ಉಕ್ಕಿದ ಗಂಗೆ : ಎನ್.ಜೆ.ದೇವರಾಜ ರೆಡ್ಡಿ, ನವಕರ್ನಾಟಕ ಪ್ರಕಾಶನ, ಬೆಂಗಳೂರು, ಬೆಲೆ:ರೂ.೮೦/-
8. ನೀಲು-೨ (ಲಂಕೇಶರ ಕಾವ್ಯ) : ಪಿ.ಲಂಕೇಶ್, ಲಂಕೇಶ್ ಪ್ರಕಾಶನ, ಬೆಂಗಳೂರು, ಬೆಲೆ:ರೂ.೧೫೦/-
9. ಪ್ರಿಯ ಓದುಗರೇ (ಅಂಕಣ ಬರಹಗಳು) : ಸಂಧ್ಯಾ ಪೈ, ತುಲಾ ಪಬ್ಲಿಕೇಷನ್ಸ್, ಮಣಿಪಾಲ, ಬೆಲೆ:ರೂ.೧೦೦/-
10. ಪ್ಲೇಟೋವಿನ ಆದರ್ಶ ರಾಜ್ಯ (ಪ್ರಸಿದ್ಧ ತತ್ವಜ್ಞಾನಿಯ ಪರಿಕಲ್ಪನೆ): ಎಂ.ಎ.ವೆಂಕಟರಾವ್, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಬೆಲೆ:ರೂ.೭೦/-

ಕೃಪೆ:ವಿಜಯ ಕರ್ನಾಟಕ

ಕುಂತಿಯ ಅಂತರಾಳ

scan0011

ಈ ಪುಸ್ತಕದಲ್ಲಿ ಸಾಗುವ ದೀರ್ಘ ಸ್ವಗತ (ಸಹಜವಾಗಿಯೇ) ಮಹಾಭಾರತದ ಮುಖ್ಯ ಪಾತ್ರ ಕುಂತಿಯದ್ದು. ಪುಟಗಟ್ಟಲೆ ಇದು ಹರಿಯುತ್ತದೆ ಮತ್ತು ಈಗಾಗಲೇ ಕುಂತಿಯ ಕುರಿತು ಗೊತ್ತಿರುವ (ಇನ್ನಿತರರು ಬರೆದ ಪುಸ್ತಕಗಳಿಂದಾಗಿ) ಹಲವು ಸಂಗತಿ, ಭಾವನೆ, ತಲ್ಲಣ, ಇಬ್ಬಂದಿಗಳನ್ನು ತನ್ನದೇ ಶೈಲಿಯಲ್ಲಿ ನಿರೂಪಿಸುತ್ತದೆ. ಇದಕ್ಕಾಗಿ ಲೇಖಕಿ ಸಾಕಷ್ಟು ಹೋಮ್ ವರ್ಕ್ ಸಹ ಮಾಡಿದ್ದಾರೆ. ಓದುತ್ತಾ ಓದುತ್ತಾ ನಮಗೆ ಕಾಣಿಸುವ ಅಸಂಬದ್ಧತೆ, ಅಭಾಸ, ತರ್ಕವಲ್ಲದ ತರ್ಕ, ಸೂಕ್ತವೆನಿಸದ ವಿವರಣೆ ಬರೆದಿಟ್ಟುಕೊಂಡರೆ ಮುಂದೊಮ್ಮೆ ನಾವೂ `ಕುಂತಿಯ ಅಂತರಾಳಕುರಿತು ಕಿರು ಪುಸ್ತಕ ಬರೆಯಬಹುದು!

ಶೀರ್ಷಿಕೆ: ಕುಂತಿಯ ಅಂತರಾಳ ಲೇಖಕರು:ತಾರಾ ಮೂರ್ತಿ ಪ್ರಕಾಶಕರು: ಬಿ.ಎಮ್.ಶ್ರೀ ಪ್ರತಿಷ್ಠಾನ, ಬೆಂಗಳೂರು ಬೆಲೆ:ರೂ.50/-

ಕೃಪೆ:ವಿಜಯ ಕರ್ನಾಟಕ

ಅಂತರಂಗದ ಪಿಸುನುಡಿ

scan0009

ಇದು ವಸುಮತಿ ಉಡುಪ ಅವರ ಇತ್ತೀಚಿನ ಕತೆಗಳ ಸಂಕಲನ. ಶುದ್ಧ ಸಾಂಸಾರಿಕ ಕತೆಗಳು ಎನ್ನಬಹುದಾದವು ಇಲ್ಲಿವೆಯಾದೂ ಲೇಖಕಿ ಕಾಲ ದೇಶಕ್ಕೆ ತಕ್ಕಂತೆ ಸಾಂಸಾರಿಕ ಕತೆಗಳ ಹಂದರದಲ್ಲೇ ಹತ್ತು ಹಲವು ಸಮಸ್ಯೆಗಳನ್ನು ಹೆಣೆಯುತ್ತಾರೆ. ಅದು ಅತ್ಯಾಚಾರಕ್ಕೊಳಗಾದ ಮಹಿಳೆಯ ವಿವಾಹ ಕುರಿತಂತೆ ಇರಬಹುದು, ಕಷ್ಟಜೀವಿ ಅಮಾಯಕ ತಮ್ಮನಿಗೆ, ಆತನ ಸುಶಿಕ್ಷಿತ, ಸ್ಫುರದ್ರೂಪಿ, ಚಾಲಾಕಿ ಅಣ್ಣ ಮತ್ತು (ತಮ್ಮನ ಹೆಂಡತಿಯಾಗಿ ಮನೆ ಸೇರುವ) ಆತನ ಪ್ರೇಯಸಿ ಮಾಡುವ ಘೋರ ವಿದ್ರೋಹ ಇರಬಹುದು, ತಾನು ಬಹುವಾಗಿ ಮೆಚ್ಚುವ ಪತಿ, ತನ್ನ ಮಾತು, ಧೋರಣೆಗಳಲ್ಲಿಯಾದರೂ ತನ್ನನ್ನು ಪರ ಪುರುಷನಿಂದ ರಕ್ಷಿಸುವಷ್ಟು ಧೀರನಾಗಿಲ್ಲವೇಕೆ ಎನ್ನುವ ಹೆಂಡತಿಯ ಸಣ್ಣ ನಿರಾಸೆ ಇರಬಹುದು… ಎಲ್ಲ ಬಿಕ್ಕಟ್ಟುಗಳಿಗೂ ಒಂದು ಪರಿಹಾರವನ್ನು ಕತೆಗಳು ಸೂಚಿಸುತ್ತವೆಯಾದರೂ ಅದರ ನಿರ್ವಹಣೆ ಸಾಕಷ್ಟು ಸೂಕ್ಷ್ಮವಾಗಿಯೂ, ಅನೇಕ ಸ್ತರಗಳಲ್ಲೂ ನಡೆಯುವಂತೆ ಲೇಖಕಿ `ಯೋಜಿಸುತ್ತಾರೆ’. ಆದರೂ ಸಣ್ಣ ಕತೆಯೆಂಬ ಸಾಹಿತ್ಯ ಪ್ರಕಾರ ಇವೆಲ್ಲವನ್ನೂ ಮೀರಿದ ಏನನ್ನೋ ಸೆರೆ ಹಿಡಿಯಲು ಪ್ರಯತ್ನಿಸಬೇಕು ಎನ್ನುವುದು ವಸುಮತಿಯವರ ಕೃತಿಗಳನ್ನು ಓದುವಾಗ ಉಂಟಾಗುವ ಹಳಹಳಿಕೆ.

ಶೀರ್ಷಿಕೆ: ಅಂತರಂಗದ ಪಿಸುನುಡಿ ಲೇಖಕರು:ವಸುಮತಿ ಉಡುಪ ಪ್ರಕಾಶಕರು: ಅಂಕಿತ ಪುಸ್ತಕ ಬೆಲೆ: ರೂ.120/-

ಕೃಪೆ : ವಿಜಯ ಕರ್ನಾಟಕ

ಸ್ವಾಮಿ ಅಂಡ್ ಹಿಸ್ `ಫೆಂಡ್ಸ್’!

scan0009

ಕನ್ನಡದಲ್ಲಿ ವ್ಯಂಗ್ಯಚಿತ್ರಗಳ ಸಂಗ್ರಹಗಳು ಕಡಿಮೆ. ಆದರೆ ಈಗ ಹಿರಿಯ ವ್ಯಂಗ್ಯಚಿತ್ರಕಾರ ಕೆ ಆರ್ ಸ್ವಾಮಿಯವರ ಕಾರ್ಟೂನುಗಳು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಿವೆ. ಒಂದಲ್ಲ, ಎರಡು ಪುಸ್ತಕಗಳು. ಮೊದಲ ಪುಸ್ತಕದ ಹೆಸರು `ಬ್ರಹ್ಮಗಂಟು-ನಗೆ ನೂರೆಂಟು‘. ಇಲ್ಲಿನ ವ್ಯಂಗ್ಯಚಿತ್ರಗಳೆಲ್ಲಾ ವೈವಾಹಿಕ ಬದುಕಿನತ್ತ ಬೀರಿದ ನಗೆನೋಟಗಳು. ಹೆಚ್ಚಿನವು ಮದುವೆ ಮಂಟಪದಲ್ಲೇ ನಡೆಯುವ ಮೋಜಿನ ಪ್ರಸಂಗಗಳು. ಉಬ್ಬು ಹಲ್ಲು, ಕಪ್ಪು ಹುಡುಗಿ, ವರದಕ್ಷಿಣೆಯಂಥ ಹಳೆಯ ಸಂಗತಿಗಳಿಂದ ಹಿಡಿದು ವೆಬ್ ಕ್ಯಾಮರಾ ಮುಂದೆ ಕುಳಿತು ನಡೆಸುವ ಮದುವೆಗಳವರೆಗೂ ಇಲ್ಲಿನ ಕಾರ್ಟೂನುಗಳ ವ್ಯಾಪ್ತಿ ಇದೆ. ಸ್ವಾಮಿ ಇವನ್ನು ಹಲವು ವರ್ಷಗಳ ಅವಧಿಯಲ್ಲಿ ಬರೆದದ್ದು ಎಂಬುದನ್ನೂ ನಾವು ನೆನಪಿಡಬೇಕು. ಓದುತ್ತಿದ್ದರೆ ನಗು ಸಹಜವಾಗಿ ಉಕ್ಕುತ್ತದೆ. ಸಿಲ್ಲಿ ಎನ್ನುವ ಕಾರ್ಟೂನುಗಳು ಇಲ್ಲಿಲ್ಲವೇ ಇಲ್ಲ ಎನ್ನಬಹುದು. ಒಮ್ಮೆಗೇ ಹತ್ತಾರು ಹಳೆಯ ಯುಗಾದಿ, ದೀಪಾವಳಿ ವಿಶೇಷಾಂಕಗಳನ್ನು ಹರಡಿಕೊಂಡು ಕೂತ ಅನುಭವವಾಗುತ್ತದೆ.

ಎರಡನೇ ಪುಸ್ತಕದಲ್ಲಿರುವ ಕಾರ್ಟೂನುಗಳಿಗೆ ಅಡಿಬರಹಗಳಿಲ್ಲ. ಹಾಗಾಗಿ `ಲಾಫ್ಟರ್ ಡೋಸ್ಎಂಬ ಹೆಸರಿನ ಈ ಇಂಗ್ಲೀಷ್ ಪುಸ್ತಕಕ್ಕೆ ಭಾಷೆಯ ಹಂಗಿಲ್ಲ. `ಶಂಕರ್ಸ್ ವೀಕ್ಲಿ‘, `ಎನ್ಲೈಟ್ನಂತಹ ಇಂಗ್ಲೀಷ್ ನಿಯತಕಾಲಿಕಗಳಲ್ಲಿ ಪ್ರಕಟವಾದ ಚಿತ್ರಗಳೂ ಈ ಸಂಗ್ರಹದಲ್ಲಿವೆ. ಮಾತಿಲ್ಲದೆ ಸುಮ್ಮನೆ ನೋಡಿದ್ದಕ್ಕೇ ನಗಿಸುವ ಈ ಚಿತ್ರಗಳು ಕೊಡುವ ಮಜಾನೇ ಬೇರೆ.

ಈ ಎರಡೂ ವಿಭಿನ್ನ ಆಕಾರದ, ಆಕರ್ಷಕ ಪುಸ್ತಕಗಳನ್ನು ಈ ಬುಧವಾರ (ಮಾಚ್ 11) ಬೆಳಿಗ್ಗೆ 10 ಗಂಟೆಗೆ ಎಂಜಿ ರೋಡ್ ಹತ್ತಿರದ ಇಂಡಿಯನ್ ಕಾರ್ಟೂನ್ ಗ್ಯಾಲರಿಯಲ್ಲಿ ಗಿರೀಶ್ ಕಾಸರವಳ್ಳಿ ಬಿಡುಗಡೆ ಮಾಡಲಿದ್ದಾರೆ. ಅಂದಿನಿಂದ ಈ ತಿಂಗಳ 26ನೇ ತಾರೀಖಿನವರೆಗೆ ಸ್ವಾಮಿಯವರ ವ್ಯಂಗ್ಯಚಿತ್ರಗಳ ಪ್ರದರ್ಶನವೂ ಏರ್ಪಾಟಾಗಿದೆ. ಅಲ್ಲಿ ಹೋದರೆ ಕಾರ್ಟೂನುಗಳ ಲೋಕದಲ್ಲಿ ಒಂದಷ್ಟು ಹೊತ್ತು ಕಳೆದುಹೋಗಬಹುದು. ಅದು ಸಾಧ್ಯವಾಗದಿದ್ದರೂ ಪುಸ್ತಕಗಳನ್ನು ನೋಡಿ ನಗಲು ಮರೆಯದಿರಿ

ಕೃಪೆ – ವಿಜಯ ಕರ್ನಾಟಕ

ಹೆಲ್ತ್ ಕೇರ್

scan0038

ಆರೋಗ್ಯ ಸಂಬಂಧಿ ಲೇಖನಗಳು ಯಾವತ್ತೂ ಸಕಾಲಿಕವಾದದ್ದರಿಂದ ಅವು ಸಾರ್ವಕಾಲಿಕವೂ! ಹಾಗಂತ ಅನಾರೋಗ್ಯದ ಬಗ್ಗೆ ಆರೋಗ್ಯಕರ ಲೇಖನಗಳನ್ನು ಬರೆಯುವುದು ಸುಲಭವೇನಲ್ಲ. ಸರಳತೆ ಮತ್ತು ಸ್ಪಷ್ಟತೆ ಅಲ್ಲಿ ಬಹಳ ಮುಖ್ಯ. ಇಂತಹ ಪುಸ್ತಕಗಳಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ. ಕಾಯಿಲೆಗಳ ಬಗೆಗಿನ ಸಂಶಯ, ಪ್ರಶ್ನೆಗಳನ್ನು ನಿವಾರಿಸಿ ಸಮಾಧಾನ ನೀಡುವಲ್ಲಿ ಇವುಗಳ ಪಾಲು ದೊಡ್ಡದು. ಆರು ಭಾಗಗಳಲ್ಲಿ ಹರಡಿಕೊಂಡಿರುವ ಈ ಪುಸ್ತಕದಲ್ಲಿ ಕಣ್ಣಿನ ನಾನಾ ತೊಂದರೆಗಳ ಬಗ್ಗೆಯೇ ಇಪ್ಪತ್ತು ಲೇಖನಗಳಿವೆ. ಪತ್ರಿಕೆಯಲ್ಲಿ ಆಗಾಗ ಪ್ರಕಟವಾಗಿರುವ ಈ ಲೇಖನಗಳು, ಪುಸ್ತಕದಲ್ಲಿ ಒಟ್ಟಾಗಿ ಒಂದು ತರಹದ ಸಮಗ್ರತೆ ಪ್ರಾಪ್ತವಾಗಿದೆ. ಕೆಲವು ಲೇಖನಗಳಿಗೆ ಚಿತ್ರ ಸಹಾಯವೂ ಇರುವುದು ಓದಿಗೆ ಉಪಯೋಗಕಾರಿ. ನಾನಾ ಕಾಯಿಲೆಗಳ ಬಗೆಗಿನ ಪ್ರಾಥಮಿಕ ಮಾಹಿತಿ ಇಲ್ಲಿ ಸಿಗುತ್ತದೆ. ಪ್ರತಿ ಲೇಖನದಲ್ಲೂ ಉಪಶೀರ್ಷಿಕೆಗಳನ್ನು ನೀಡುತ್ತಾ, ಬಹಳ ಸ್ಪಷ್ಟವಾಗಿ, ಬಿಡಿಬಿಡಿಯಾಗಿ ವಿವರಗಳಿರುವುದು ಈ ಪುಸ್ತಕದ ವೈಶಿಷ್ಟ್ಯ.

ಶೀರ್ಷಿಕೆ: ಹೆಲ್ತ್ ಕೇರ್ ಲೇಖಕರು: ಪ್ರಕಾಶ್ ಹೆಬ್ಬಾರ ಪ್ರಕಾಶಕರು: ವಿಕ್ರಂ ಪ್ರಕಾಶನ ಪುಟಗಳು: 180 ಬೆಲೆ:ರೂ.95/-

ಕೃಪೆ : ವಿಜಯ ಕರ್ನಾಟಕ

ಕಣ್ಣ ಕಣಿವೆ

scan0037

ರೇಣುಕಾ ನಿಡಗುಂದಿ ದೆಹಲಿಯಂತಹ ಮಹಾನಗರದಲ್ಲಿ ಕುಳಿತು ಕನ್ನಡ ಕವಿತೆ ಬರೆಯುತ್ತಿರುವವರು. ಆದ್ದರಿಂದ, ಸಹಜವಾಗಿ, ಅವರಿಗೆ ಹೀಗೆನಿಸುತ್ತದೆ; ` … ನಮ್ಮದೆನ್ನುವ ಎಲ್ಲದರಿಂದಲೂ ದೂರವಿರುವ ಹೊರನಾಡಿನಲ್ಲಿ ನಮ್ಮ ನೋವು, ನಲಿವುಗಳನ್ನು ಸಂತೈಸಿಕೊಳ್ಳುತ್ತ, ಹೊರಗಿನ ಆರ್ಭಟ, ರೀತಿ ನೀತಿಗಳಿಗೆ ಒಗ್ಗಿಕೊಳ್ಳುತ್ತ ನಮ್ಮ ಸಾಹಿತ್ಯಾಸಕ್ತಿ ಅಮೂರ್ತವಾದ ಅದೇನನ್ನೋ ಕಂಡುಕೊಳ್ಳುವ ನಿರಾಳ ಮನಸ್ಸಿನ ಚಿಂತನೆಯ ಒಂದು ಅಪೂರ್ವ ಹಂತದಲ್ಲಿ ಕಾವ್ಯ ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ’. ಹೀಗೆ ಹುಟ್ಟಿ ಸೂಕ್ಷ್ಮಾಭಿವ್ಯಕ್ತಿಯ ಈ ತುಣುಕು ಗಮನಿಸಿ : ತೋರುತ್ತದೆ ಒಮ್ಮೊಮ್ಮೆ / ವ್ಯಥೆಯೂ ಸಣ್ಣಗೆ / ಕೊರಕಲಿನಲ್ಲಿ ಹರಿಯುವ / ನಿರ್ಜಲದಂತೆ / ಹೀಗೆ ಕೊರೆಯುತ್ತಲೇ / ಕರುಳಲ್ಲಿ ಮುಳ್ಳಾಡಿಸಿದಂತೆ / ಅಳತೆ ಮೀರಿ ಆಳವಾಗಿ / ಸಿಗಿದು ಸೀಳಿ ಒಗೆದಂತೆ / ಉಣಿಸಲಾರದ ತುತ್ತು ಕೈಜಾರಿ ಹೋದಂತೆ / ಹನಿಸಲಾರದ ನೀರು – ವ್ಯರ್ಥ ನೆಲ ಸೇರಿದಂತೆ… (ಚಿಂತೆ ಮತ್ತು ಚಿತೆ)

ಶೀರ್ಷಿಕೆ: ಕಣ್ಣ ಕಣಿವೆ ಲೇಖಕರು: ರೇಣುಕಾ ನಿಡಗುಂದಿ ಪ್ರಕಾಶಕರು: ಪ್ರಗತಿ ಗ್ರಾಫಿಕ್ಸ್ ಪುಟಗಳು: 80 ಬೆಲೆ:ರೂ.50/-

ಕೃಪೆ :ವಿಜಯ ಕರ್ನಾಟಕ

ಸಾವಿನ ಮನೆಯ ಜಗುಲಿಯಲ್ಲಿ ಕೂತ ಹುಡುಗ ನಚಿಕೇತ

agnidivya1

`ಕಂಠೋಪನಿಷತ್ತಿನ ಮಂತ್ರಗಳಿಗೆ ನನ್ನನ್ನು ನಾನು ಒಪ್ಪಿಸಿಕೊಂಡ ಬಗೆಎಂಬುದಾಗಿ ಕವಯತ್ರಿ ಈ ಸಂಕಲನದ ಕವಿತೆಗಳ ಹುಟ್ಟನ್ನು ವಿವರಿಸಿದ್ದಾರೆ. ಇವುಗಳಲ್ಲಿ ಯಾವುದೇ ಅನುಕ್ರಮವನ್ನು ಪಾಲಿಸದೆ ತಮಗೆ ಬೇಕಾದ 18 ಶ್ಲೋಕಗಳನ್ನು ಆರಿಸಿಕೊಂಡಿರುವುದಾಗಿಯೂ ಅವರು ಹೇಳುತ್ತಾರೆ. ಮೂಲ ಮಂತ್ರಗಳಿಲ್ಲದೆಯೂ ತಮ್ಮ ರಚನೆಗಳನ್ನು ಸ್ವತಂತ್ರ ಪದ್ಯಗಳಾಗಿ ಓದಬಹುದಾದ ಸಾಧ್ಯತೆ ಇದೆ ಎಂದು ಅವರು ಭಾವಿಸಿಕೊಂಡಿದ್ದಾರೆ. ಹಾಗಾಗಿ, ಕ್ಷೇಮವಾಗಿ, ಕಂಠೋಪನಿಷತ್ತಿನ ತಂಟೆಗೆ ಹೋಗದೆ, ಮೊದಲು ಈ ಕವಿತೆಗಳಿಗೇ ಮುಖಾಮುಖಿಯಾಗೋಣ.

ಸುಕುಮಾರ ಭಾವ-ಭಾಷೆಗಳನ್ನು ನೀರ ಮೇಲಿನ ರಂಗವಲ್ಲಿಯಂತೆ ಸೆರೆ ಹಿಡಿದ ಕಾರಣಕ್ಕಾಗಿ ತಮ್ಮ ಮೊದಲ ಸಂಕಲನದಲ್ಲೆ ಗಮನ ಸೆಳೆದ ಸಂಧ್ಯಾದೇವಿಯವರ ಈ ಎರಡನೆಯ ಪುಸ್ತಕದಲ್ಲೂ ಅದರ ಮುಂದುವರಿಕೆಯಿದೆ. ಅದು ಬೇಡ ಅನಿಸಿದರೆ ರೂಢಿಗತ ಭಾಷಾಕವಚದಲ್ಲಿಯೇ ದೀಪದ ಕುಡಿಯಂತಹುದೇನನ್ನೋ ಅಡಗಿಸಿಕೊಡುವಂಥವೂ ಇವೆ.

ಉದಾಹರಣೆಗೆ, ನಚಿಕೇತ ಪದ್ಯ:

ಹಾಲು ಕುಡಿದು ಗೋಲಿ ಆಡಿಕೊಂಡಿರಬೇಕಾದ ಹುಡುಗ ಅಮೃತ ಬೇಕೆಂದು ಹಟ ಹಿಡಿದ.

ಹಾಲಿನ ಬಟ್ಟಲಲ್ಲಿ

ಸಾವಿನ ಪ್ರಶ್ನೆ ಬಿತ್ತು!

ಹುಡುಗನ ಪಾಲಿಗೆ

ಹಾಲಿನಲ್ಲಿ ಸಾವಿತ್ತೇ?

ಅಲ್ಲ..ಲ್ಲ ಹುಡುಗನ ಪಾಲಿನ ಹಾಲು

ಸಾವು ಕುಡಿಯಿತು

ಸಾವಿನಲ್ಲಿ ಸಾವಿದೆ

ಸಾವಿನ ಪ್ರಶ್ನೆಯಲ್ಲಿ ಏನಿದೆ?

ಗೋಲಿ ಆಟದಂತೆ ಹುಡುಗನಿಗೆ

ಸಾವ ತಿಳಿಯುವ ಕುತೂಹಲ!

ಹುಟ್ಟಿನ ಪ್ರಶ್ನೆಯ ಹಿಡಿದು ಕೈಯಲ್ಲಿ

ಸಾವಿನ ಮನೆಯ ಜಗುಲಿಯಲ್ಲಿ

ಕಾದು ಕೂತ ಮೊದಲ ಹುಡುಗ

ಹೆಸರು ನಚಿಕೇತ.

ಮುಂತಾಗಿ ಮುಂದುವರಿಯುವ ಮನನೀಯ ಸಾಲುಗಳಿವೆ.

ಶೀರ್ಷಿಕೆ: ಅಗ್ನಿದಿವ್ಯ ಲೇಖಕರು: ಸಂಧ್ಯಾದೇವಿ ಪ್ರಕಾಶಕರು: ಅಭಿನವ ಪುಟಗಳು: ಬೆಲೆ:ರೂ. /-

ಕೃಪೆ : ವಿಜಯ ಕರ್ನಾಟಕ