ವ್ಯೂಹ – ಕತೆ ಹೇಳಲೆಂದೇ ಬದುಕಿದ ಲೇಖಕನ ಕಾದಂಬರಿ

ನೊಬೆಲ್ ವಿಜೇತ ಲ್ಯಾಟಿನ್ ಅಮೇರಿಕನ್ ಸಾಹಿತಿ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಕನ್ನಡ ಸಾಹಿತ್ಯ ವಾತಾವರಣಕ್ಕೆ ಅಪರಿಚಿತರೇನಲ್ಲ. ಅವರ ಕಾದಂಬರಿಗಳ ಉಲ್ಲೇಖ, ಮಾಯಾ ವಾಸ್ತವ ಶೈಲಿ ಎಲ್ಲ ಅಷ್ಟಿಷ್ಟು ಇಲ್ಲಿಯೂ ಚರ್ಚೆಗೊಳಗಾಗಿವೆ. ಕನ್ನಡಿಗರ ಸಾಹಿತ್ಯಕ ಸಂವೇದನೆಯನ್ನೂ ಅವರು ಮೀಟಿದ್ದಾರೆ, he strikes a chord. ಆದರೆ ಮಾರ್ಕ್ವೆಜ್ ಕಾದಂಬರಿಗಳ ಕನ್ನಡ ಅನುವಾದ ಓದುವುದು ಮಾತ್ರ ದುಸ್ತರ. ಪ್ರಸ್ತುತ ಅನುವಾದ ಕನ್ನಡ ಜಾಯಮಾನಕ್ಕೆ ಒಗ್ಗುವಂತೆ ಇರುವ (ಪುಟ ತಿರುವಿದಾಗ) ಭರವಸೆ ಹುಟ್ಟಿಸುವುದರಿಂದ ಪರವಾಗಿಲ್ಲ.

ಲ್ಯಾಟಿನ್ ಅಮೆರಿಕಾದ ಆರು ದೇಶಗಳಲ್ಲಿ ವಿಮೋಚಕನೆಂದು ಪ್ರಖ್ಯಾತನಾದ ಜನರಲ್ ಸಿಮೋನ್ ಬೊಲಿವಾರ್ ವ್ಯಕ್ತಿತ್ವವನ್ನು ಮರು ಕಲ್ಪಿಸಿಕೊಂಡು ಬರೆಯಲಾಗಿರುವ ಈ ಕಥಾನಕದಲ್ಲಿ ಎಲ್ಲ ವೀರರ ಕತೆಗಳಲ್ಲಿರುವಂತೆ ಉಪ್ಪು, ಹುಳಿ, ಖಾರ, ಕ್ಷೀರ ಇವೆ. ಇದ್ದು ಅವನನ್ನು ಮನುಷ್ಯನನ್ನಾಗಿಸಿದೆ. ಲ್ಯಾಟಿನ್ ಅಮೇರಿಕನ್ ದೇಶಗಳನ್ನು ಒಗ್ಗೂಡಿಸುವ ಆತನ ಕನಸು, ಅದು ಒಡೆಯುವುದು, ಅವನು ಅಧಿಕಾರಚ್ಯುತನಾಗುವುದು, ಕೊಲೆಯ ಸಂಚುಗಳಲ್ಲಿ ಸಿಲುಕಿಕೊಳ್ಳುವುದು, ಮಾರಣಾಂತಿಕ ಕಾಯಿಲೆಗೆ ತುತ್ತಾಗುವುದು, ಆದಾಗ್ಯೂ ಯುದ್ದಗಳಲ್ಲಿ ತೊಡಗಿಕೊಳ್ಳುವಷ್ಟೇ ಸಾಹಸದಿಂದ ಪ್ರಣಯ ಪ್ರಸಂಗಗಳಲ್ಲಿಯೂ ಭಾಗವಹಿಸುವುದು – ಈ ಎಲ್ಲ ರೆಸಿಪಿ ಇದೆ.

ಅದೂ ಮಾರ್ಕ್ವೆಜ್ ಬರವಣಿಗೆಯಲ್ಲಿ ಅಂದರೆ be prepared for a Blast!

ಶೀರ್ಷಿಕೆ : ವ್ಯೂಹ ಲೇಖಕರು : ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅ: ಪಿ. ವಿ. ನಾರಾಯಣ ಪ್ರಕಾಶಕರು : ಸೌಮ್ಯ ಎಂ. ಪುಟಗಳು :231 ಬೆಲೆ:ರೂ.120/-

ಕೃಪೆ : ವಿಜಯ ಕರ್ನಾಟಕ