ಸದ್ಭಾವ

scan0056-1

ಕವಿ ಚೆನ್ನವೀರ ಕಣವಿಯವರ ಮುನ್ನುಡಿ, ಬೆನ್ನುಡಿಗಳನ್ನು ಹಾಗೂ ಕೆಲವು ಹಿರಿಯರು, ಕಿರಿಯರ ಕುರಿತಾದ ಸಾಂದರ್ಭಿಕವಾಗಿ ಬರೆದ ಲೇಖನಗಳನ್ನು ಒಳಗೊಂಡ ಸಂಗ್ರಹ ಇದು. ಈ ಮೊದಲು ಅವರ ಮುನ್ನುಡಿಗಳದೇ ಒಂದು ಸಂಗ್ರಹ `ಶುಭ ನುಡಿಯೆ ಹಕ್ಕಿಪ್ರಕಟವಾಗಿತ್ತು.

ಸ.ಸ.ಮಾಳವಾಡ, ಬೆಟಗೇರಿ ಕೃಷ್ಣಶರ್ಮ, ಬಸವರಾಜ ಸಾದರ ಮುಂತಾದ ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅಷ್ಟೇನೂ ಪ್ರಸಿದ್ಧರಲ್ಲದ ಲೇಖಕರಿಗೂ ಬೆನ್ನುತಟ್ಟಿ ಅವರು ಮುನ್ನುಡಿಗಳನ್ನು ಬರೆದಿರುವುದನ್ನು ನೋಡಬಹುದು.

ಇಲ್ಲಿ ಕುತೂಹಲಕಾರಿಯಾಗಿರುವುದು ಶೆ.ಗೋ.ಕುಲಕರ್ಣಿಯವರ `ನಾ ಕಂಡ ಗೆಳೆಯರ ಗುಂಪುಪುಸ್ತಕಕ್ಕೆ ಬರೆದ ಬೆನ್ನುಡಿ. ಈ ಪುಸ್ತಕ ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ. ಮೂರೂ ಸಂಪುಟಗಳಿಗೆ ಅವರು ಪ್ರತ್ಯೇಕ ಬೆನ್ನುಡಿಗಳನ್ನು ಬರೆದಿದ್ದಾರೆ. ತರುಣ ಬರಹಗಾರರಿಗೆ ಹಾರೈಕೆ, ಅಭಿನಂದನೆಗಳನ್ನು ಕಣವಿಯವರು ಮಾಡಿದ್ದಾರೆ. ಕೆಲವು ಹಿರಿಯ ಲೇಖಕರ ಕೃತಿಗಳಿಗೆ ಬರೆದ ಬೆನ್ನುಡಿ, ಮುನ್ನುಡಿಗಳನ್ನು ಹೊರತುಪಡಿಸಿದರೆ ಒಂದು ಕಾಲಘಟ್ಟದ ಸಾಹಿತ್ಯ ಸಂದರ್ಭವನ್ನು ಅರಿಯಲು ಈ ಪುಸ್ತಕ ಸಹಕಾರಿಯಾಗುವಂತಿದೆ.

`ವ್ಯಕ್ತಿ ಶಕ್ತಿ : ನನಗೆ ಕಂಡಷ್ಟು : ಭಾಗದಲ್ಲಿ ಜಿ. ನಾರಾಯಣ, ಚದುರಂಗ, ಗೊರೂರು ಮುಂತಾದವರ ವ್ಯಕ್ತಿತ್ವವನ್ನು ರೇಖಿಸಿದ್ದಾರೆ. ಸಂಕೀರ್ಣ ಭಾಗದಲ್ಲಿ ಮಧುರ ಚೆನ್ನರ ಕಾವ್ಯದ ಬಗ್ಗೆ, `ಜಾನಪದ ದೀಪಾರಾಧನೆ ಸಮಾರಂಭಮುಂತಾದ ವಿಶೇಷ ಸಂಗತಿಗಳ ಬಗ್ಗೆ ಬರೆದಿದ್ದಾರೆ. ಇಲ್ಲಿ ಅವರ ಒಂದು ಅನುವಾದವೂ ಇದೆ. ಚೀನಾದ ತತ್ವಜ್ಞಾನಿ ಲಿನ್ ಯು ಟಾಂಗ್ ನ `ದಿ ಇಂಪಾರ್ಟನ್ಸ್ ಆಫ್ ಲಿವಿಂಗ್ಎಂಬ ಪುಸ್ತಕದ ಕೆಲವು ಅಧ್ಯಾಯಗಳನ್ನು ಅನುವಾದ ಮಾಡಿದ್ದಾರೆ. ಈ ಅನುವಾದ ಸುಂದರವಾಗಿದೆ. ಇಲ್ಲಿ ಕಣವಿಯವರು ಬರೆದಿರುವ ಬಹುಪಾಲು ಲೇಖಕರು ಉತ್ತರ ಕರ್ನಾಟಕದವರು ಎನ್ನುವುದು ಕುತೂಹಲಕಾರ.

ಕಣವಿಯವರ ಶೈಲಿ ತಿಳಿನೀರಿನಂತೆ ಪಾರದರ್ಶಕವಾಗಿರುವಂಥದ್ದು. ಅದು ಅವರ ಎಂದಿನ `ಸದ್ಭಾವದಿಂದ ಇನ್ನಷ್ಟು ಕಳೆಗಟ್ಟಿದೆ.

ಶೀರ್ಷಿಕೆ: ಸದ್ಭಾವ ಲೇಖಕರು: ಚೆನ್ನವೀರ ಕಣವಿ ಪ್ರಕಾಶಕರು: ಸಂವಹನ ಪುಟಗಳು: 216 ಬೆಲೆ:ರೂ.150/-

ಕೃಪೆ : ಪ್ರಜಾವಾಣಿ

ಕಿರಿದರಲ್ಲಿ ಹಿರಿದರ್ಥ ನೀಡುವ ಬಣ್ಣದ ಬುಗುರಿ

ಬಿ.ಎಂ.ಹನೀಫ್ ಅವರು 32 ವಾರಗಳ ಕಾಲ ಬರೆದ ಅಂಕಣ ಬರಹಗಳ ಸಂಕಲನವಿದು. ನಿರ್ದಿಷ್ಟ ವೇಳೆಗೆ ನಿರ್ದಿಷ್ಟವಾದ ಲೇಖನವನ್ನು ಬರೆಯುವುದು ಕಷ್ಟವಾದರೂ ಸೃಜನಶೀಲ ಗುಣಕ್ಕೆ ಊನಬಾರದಂತೆ ಜಗತ್ತಿನ ಹಲವು ಸಮಸ್ಯೆಗಳನ್ನು ಅನಾವರಣಗೊಳಿಸುವ ಪ್ರಯತ್ನದಲ್ಲಿ ಲೇಖಕರು ಯಶಸ್ಸನ್ನು ಕಂಡಿದ್ದಾರೆ. `ಮಧ್ಯಮರ ಸಂಸ್ಕೃತಿ, ಅಲಕ್ಷಿತ ಸಂಸ್ಕೃತಿ, ಇಸ್ಲಾಂ ಸಂವೇದನೆ, ಆಹಾರ ಪದ್ಧತಿ, ಸೌಂದರ್ಯ, ಭಾಷಾ ಸಮಸ್ಯೆ, ಜಾತಿ, ಧರ್ಮ, ಮತಾಂತರ ಮುಂತಾದ ಸಮಾಜ ಸರ್ವಮುಖಗಳೂ ಇಲ್ಲಿ ವಿಶ್ಲೇಷಣೆಗೊಳಪಟ್ಟಿವೆ.

ಪ್ರಾದೇಶಿಕ ಸಂಸ್ಕೃತಿಯ ಚಹರೆಗಳನ್ನು ನಿರ್ವಚಿಸುತ್ತಲೇ ಸಮಸ್ಯೆಗಳ ಪರಿಹಾರದತ್ತ ಗಮನ ಸೆಳೆಯುವ ಪ್ರಸ್ತುತ ಬರಹಗಳು ಕೆಲವು ಪತ್ರದ ಮಾದರಿಯಲ್ಲಿದ್ದರೆ ಇನ್ನು ಕೆಲವು ಲೇಖನದ ಸ್ವರೂಪದಲ್ಲಿವೆ. ಕಥೆಯ ಧಾಟಿಯಲ್ಲಿ ನಮ್ಮ ನಡುವಿನ ಸಮಸ್ಯೆಗಳನ್ನು ಬಿಚ್ಚಿಡುವುದರಿಂದ ತೀರಾ ಆಪ್ತವೆವಿಸುತ್ತವೆ. ಸಮಾಜದ ವಿಭಿನ್ನ ವರ್ಗಗಳ ಶೋಚನೀಯ ಸ್ಥಿತಿಯನ್ನ ನಿರೂಪಿಸುವಾಗ ದುಡಿಯುವ ವರ್ಗದ ಸಂಕಷ್ಟಗಳನ್ನ ಗುರುತಿಸುವ ಮಾರ್ಗವೇ ಹೆಚ್ಚು ಗ್ರಹೀತವಾಗುತ್ತದೆ. ಜಾಗತೀಕರಣದ ಯುಗದಲ್ಲಿ ಅಸಂಘಟಿತ ಹೆಣ್ಣುಮಕ್ಕಳ ಬಡತನದ ಬಗ್ಗೆ ಕಾಳಜಿವಹಿಸುತ್ತಿಲ್ಲವೆಂಬ ವಿಷಾದದೊಂದಿಗೆ ಸಾಮಾನ್ಯ ಪೇದೆಗಳ ಆರ್ಥಿಕ ದುಃಸ್ಥಿತಿಯ ಚಿತ್ರವನ್ನು ಕಟ್ಟಿಕೊಡಲು ಮರೆಯುವುದಿಲ್ಲ. ಬದಲಾಗಿರುವ ಜೀವನಶೈಲಿಯ ಸಂದರ್ಭದಲ್ಲಿ ಮನುಷ್ಯನ ಹಲವಾರು ಬಿಕ್ಕಟ್ಟುಗಳನ್ನು ಮತಧರ್ಮಕೇಂದ್ರಿತ ಬರಹಗಳಲ್ಲಿ ಚರ್ಚಗೆ ಎತ್ತಿಕೊಳ್ಳಲಾಗಿದೆ.

ಸುಮಾ, ಅಮೀರ್ ಖಾನ್, ಅಭಿಷೇಕ್ ಬಚ್ಚನ್ – ಕುರಿತಾದ ಬರಹಗಳು ವ್ಯಕ್ತಿಕೇಂದ್ರಿತವೆನಿಸಿದರೂ ತತ್ ಸಂಬಂಧವಾದ ಸಮಸ್ಯೆಗಳ ಜಾಡಿನಲ್ಲೇ ಸಾಗುವುದರಿಂದ ಪ್ರಬಂಧಗಳಿಗೆ ಬೇರೊಂದು ಆಯಾಮವೆ ಪ್ರಾಪ್ತವಾಗಿದೆ. ಸಾರ್ವತ್ರಿಕಗೊಳಿಸುವ ಪ್ರತಿಭೆಯಿಂದಾಗಿ ಇವು ಕಥೆ, ಪ್ರಬಂಧ, ಇಲ್ಲವೇ ಕ್ಷೇತ್ರಕಾರ್ಯದ ಅನುಭವವನ್ನು ನೀಡಬಯಸುತ್ತವೆ.

ಇಲ್ಲಿ ಕೆಲವು ಸಂಗತಿಗಳು ಹೊಸವಲ್ಲದಿದ್ದರೂ ಅವು ಪಡೆದುಕೊಳ್ಳುವ ತಿರುವು ಮಾತ್ರ ನೂತನವಾದುದು. ನಿರೂಪಣೆ ಸರಳವೆನಿಸಿದರೂ ಒಳಗೊಳ್ಳುವ ವಿಷಯ ಮಾತ್ರ ತೀರಾ ಗಂಭೀರ. ಸಮಸ್ಯೆಗಳ ತಡಕಾಟದಲ್ಲಿ ಶೋಧಕನ ದೃಷ್ಟಿಯೊಂದಿಗೆ ಮಾನವಪರ ಧೋರಣೆಯನ್ನು ಗುರುತಿಸಬಹುದು. ವಿಷಯಗಳಿಗೆ ಲಗ್ಗೆ ಹಾಕುವಾಗ ಸಾಹಿತ್ಯ ಮತ್ತು ಚರಿತ್ರೆ ಸಂದರ್ಭಚಿತ ಆಕಾರವಾಗಿ ಬಳಕೆಗೊಳ್ಳುತ್ತವೆ. ಸೂಫಿ ಸಂತರು, ಬೀಚಿ, ದಿನಕರ ದೇಸಾಯಿ, ಯಯಾತಿ – ಮುಂತಾದವರನ್ನು, ತಾಜಮಹಲಿನ ನೆಪದಲ್ಲಿ ಅಂತರಧರ್ಮಯ ವಿವಾಹ ಸಂಬಂಧಗಳನ್ನು, ನಗೆಹಬ್ಬದ ನೆಪದಲ್ಲಿ ಮನುಷ್ಯನ ಸಿನಿಕತನ ಇತ್ಯಾದಿಗಳನ್ನು ಗಮನಿಸಿದರೆ ವರ್ತಮಾನದಲ್ಲಿದ್ದು ಪರಂಪರೆಯನ್ನು ನೆನಪಿಸುವಲ್ಲಿ ಬರಹಗಳು ಸಾಫಲ್ಯ ಹೊಂದುತ್ತವೆ.

ಆತ್ಮಾವಲೋಕನ ಪ್ರವೃತ್ತಿ, ಚಲನಶೀಲ ಗುಣ, ಕಾವ್ಯಾತ್ಮಕವಾದ ಶೀರ್ಷಿಕೆ, ಕಿರಿದರಲ್ಲಿ ಹಿರಿದರ್ಥ ನೀಡುವ ಬಗೆ, ವೈಚಾರಿಕ ದೃಷ್ಟಿ, ಅರವಿಂದ ಮಾಲಗತ್ತಿಯವರು ಮುನ್ನುಡಿಯಲ್ಲಿ ಹೇಳಿರುವಂತೆ ಸಂಕಥನದ ಮಾದರಿಯನ್ನು ಅನುಸರಿಸುವ ರೀತಿ-ಈ ಎಲ್ಲದರಿಂದಲೂ `ಬಣ್ಣದ ಬುಗುರಿಯ ಬರಹಗಳು ವೈವಿಧ್ಯಮಯ ಬದುಕಿನ ಅನುಸಂಧಾನ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಜಾಗತೀಕರಣದ ದಿನಗಳಲ್ಲಿ ನಮ್ಮ ಸಾಹಿತ್ಯದ ಮಾದರಿಗಳು ಪಡೆದುಕೊಳ್ಳುವ ಸ್ವರೂಪ ಯಾವುದಾಗಿರಬೇಕು ಎಂಬುದರತ್ತಲೂ ಪರೋಕ್ಷವಾಗಿ ಇವು ಸೂಚನೆ ನೀಡುವಂತಿರಬೇಕು.

ಡಾ. ಜಿ.ಆರ್. ತಿಪ್ಪೇಸ್ವಾಮಿ

ಶೀರ್ಷಿಕೆ : ಬಣ್ಣದ ಬುಗುರಿ ಲೇಖಕರು : ಬಿ. ಎಂ. ಹನೀಫ್ ಪ್ರಕಾಶಕರು : ಸಂವಹನ ಪುಟಗಳು : 140 ಬೆಲೆ: ರೂ. 105/-

ಕೃಪೆ : ಪ್ರಜಾವಾಣಿ