ಆತ್ಮಕಥೆಯೋ ಕಾದಂಬರಿಯೋ!

ಗಾಂಧಿ ಕ್ಲಾಸ್’ ಕೃತಿಯನ್ನು ಓದಿದ ನಂತರ ನನಗೆ ಬಂದ ಸಂದೇಹ ಇದು: ಕುಂವೀ ಮರೆತು ಆತ್ಮಕತೆಯ ಬದಲಿಗೆ ತಾವು ಬರೆದಿರುವ ಹೊಸ ಕಾದಂಬರಿಯೊಂದನ್ನು ನನಗೆ ಕಳುಹಿಸಿದ್ದಾರೆಯೇ?

ಇಷ್ಟು ರೋಚಕ ನಿರೂಪಣೆ, ಇಷ್ಟು ರಂಜಕ ಹಾಗೂ ಅಸಾಧಾರಣ ಘಟನೆಗಳು ಕಾದಂಬರಿಯಲ್ಲಲ್ಲದೆ ಆತ್ಮಕಥೆಯಲ್ಲಿರಲು ಸಾಧ್ಯವೆ? ಉದಾಹರಣೆಗೆ: ಕೇವಲ ತನ್ನ ಸುಯೋಧನ-ಛಲದಿಂದಾಗಿ ಸಾಕಷ್ಟಿದ್ದ ಸ್ಥಿರ-ಚರಾಸ್ತಿಗಳನ್ನು ಕಳೆದುಕೊಂಡು ಅಹನಹ್ಯನಿಗೆ ಒದ್ದಾಡುವ ಸ್ಥಿತಿಗೆ ಬಂದ `ಹೀರೋ’ ತಂದೆಯ ಮಗನಾಗಿ, ಅನೇಕರ ಸಹಾಯದಿಂದ, ಅತಿ ಕಷ್ಟದಿಂದ ಎಸ್.ಎಸ್.ಎಲ್.ಸಿ. ಪಾಸಾಗಿ ಕೆಲಸವಿಲ್ಲದೆ ಸೈನ್ ಬೋರ್ಡ ಪೇಂಟರ್ ಆಗುವ, ರೈಲ್ವೇ ದಿನಗೂಲಿಯಾಗುವ, ರೈಲ್ವೇ ಪ್ಲಾಟ್ ಫಾರ್ಮನಲ್ಲಿ ಮೂರು ದಿನ ಹಸಿವೆಯಿಂದ ಸಾಯುವ ಸ್ಥಿತಿ ತಲುಪುವ, ಕೊನೆಗೆ ಶತಮಾನದಷ್ಟು ಹಿಂದುಳಿದಿರುವ ಊರೊಂದರಲ್ಲಿ ಶಾಲಾ ಮಾಸ್ತರಾಗುವ, ತಿಂಗಳಿಗೊಂದು ಕೊಲೆಯಾಗುವ ಆ ಕುಗ್ರಾಮದಲ್ಲಿ ಧೈರ್ಯದಿಂದ ದಲಿತರನ್ನು ಶಾಲೆಗೆ ಸೇರಿಸಿಕೊಂಡೂ ಬದುಕಿ ಉಳಿಯುವ, `ಕಪ್ಪು’ ಎಂಬ ತನ್ನ ಮೊದಲ ಕಾದಂಬರಿಯ ಕಾರಣದಿಂದ ಎಂದೋ ಕೊಲೆಯಾಗಬಹುದಾಗಿದ್ದ, ಸಿನೆಮಾ ಪ್ರಪಂಚದಲ್ಲಿ ಎಲ್ಲರಿಂದ ವಂಚಿಸಲ್ಪಡುವ, ಅಕಾಡೆಮಿ ಪ್ರಶಸ್ತಿ ಪಡೆದ `ಅರಮನೆ’ ಕಾದಂಬರಿಯ ಬ್ಲರ್ಬ ತೋರಿಸಿ ಅಮೆರಿಕಾಕ್ಕೆ ವೀಸಾ ಪಡೆಯುವ – ಇಂತ ವ್ಯಕ್ತಿ ಕಥಾ ನಾಯಕನಾಗಿರುವುದು.

ಆ ವ್ಯಕ್ತಿಯೇ ಕವಿಯಾಗಿ, ಸಾಹಿತ್ಯಕ ಕ್ಷೇತ್ರವನ್ನು ಪ್ರವೇಶಿಸಿ, ಅಶ್ವಥ್ ಅವರ ಕೂಗಾಟಕ್ಕೆ ಹೆದರಿ ಒಂದು ರಾತ್ರಿಯಲ್ಲಿ 15 ಹಾಡು ಬರೆದು ಅಗಾಧ ಜನಪ್ರಿಯತೆ ಪಡೆಯುವ, ನೂರಾರು ಕತೆ ಬರೆದು ಸವೆದ ತನ್ನ ನಡುಬೆರಳನ್ನು `ಇದೊಂದು ರೂಪಕ’ ಎಂದು ಅಭಿಮಾನದಿಂದ ತೋರಿಸುವ, ಪ್ರಕಾಶಕರಿಗೆ ಮಾತು ಕೊಟ್ಟಂತೆ ಮೂರು ವಾರಗಳಲ್ಲಿ 600 ಪುಟಗಳ `ಶಾಮಣ್ಣ’ ಎಂಬ ಕಾದಂಬರಿ ಬರೆದು ಪ್ರಸಿದ್ಧನಾದ, `ಅರಮನೆ’ ಎಂಬ 1200 ಪುಟಗಳ ಕಾದಂಬರಿಯನ್ನು 500 ಪುಟಗಳಿಗೆ ತರಲು ಮತ್ತೆ ಮತ್ತೆ ಅದನ್ನು ಮುರಿದು ಕಟ್ಟಿ ಕೊನೆಗೆ ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ, ಈ ಸಾಧನೆಗಳ ನಂತರವೂ ಅಬೋಧ ಬಾಲಕನ ಪ್ರೀತಿ=ವಿಸ್ಮಯತೆಗಳನ್ನು ಉಳಿಸಿಕೊಂಡಿರುವ ಸಾಹಿತಿಯೂ ಆಗಿರುವುದು.

ಇವೆಲ್ಲವೂ ಒಂದು ರೋಚಕ ಕಾದಂಬರಿಯಲ್ಲಿ ಮಾತ್ರ ಸಾಧ್ಯ: ಅಥವಾ ಸೋಮಶೇಖರ್ ಉರುಫ್ ವೀರಭದ್ರಪ್ಪ ಉರುಫ್ ಕುಂವೀ ಎಂಬ ಅಧ್ಬುತ ಪ್ರತಿಭಾಶಾಲಿಯ ಅಸಾಧಾರಣ ಬದುಕಿನಲ್ಲಿ ಮಾತ್ರ ಸಾಧ್ಯ ಎಂದು ಆಶ್ಚರ್ಯ, ಅಭಿಮಾನ, ಅಸೂಯೆ, ಇತ್ಯಾದಿಗಳೊಡನೆ ಗ್ರಹಿಸುವಲ್ಲಿಗೆ – ಶಂಭೋ ಶಂಕರ ಮಹಾದೇವ.

– ಡಾ. ಸಿ.ಎನ್.ರಾಮಚಂದ್ರನ್
ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಗಾಂಧೀ ಕ್ಲಾಸು (ಕುಂವೀ ಆತ್ಮ ಕಥನ)  ಲೇಖಕರು: ಕುಂವೀ   ಪ್ರಕಾಶನ: ಸಪ್ನ ಬುಕ್ ಹೌಸ್ ಪುಟ:   ಬೆಲೆ:ರೂ.225/-

ಕೃಪೆ: ಅವಧಿ ಬ್ಲಾಗು, ಸಂಯುಕ್ತ ಕರ್ನಾಟಕ

ಸಪ್ನ ಬುಕ್ ಹೌಸ್ – ಟಾಪ್ 10

ಕೃಪೆ – ಕನ್ನಡ ಪ್ರಭ

ಅಪರಾಧ, ಪೊಲೀಸರು ಹಾಗೂ ಕಾನೂನಿನ ಅರಿವು ಉಂಟುಮಾಡಬಹುದಾದ ಪುಸ್ತಕ

ಇಡೀ ಜಗತ್ತು ಆತಂಕವಾದದ ಬಿಸಿಯನ್ನು ಅನುಭವಿಸುತ್ತಿದೆ. ಅದರ ರೂಪಗಳು ಹಲವು. ಅವುಗಳ ಮೂಲ ಆಸಕ್ತಿ ಮಾತ್ರ ಜನರಿಗೆ ತೊಂದರೆ ಉಂಟು ಮಾಡುವುದೇ ಆಗಿದೆ. ಆತಂಕವಾದ ಹಾಗೂ ಅಪರಾಧ ಜಗತ್ತಿನ ಪರಿಚಯವನ್ನು ಹಿರಿಯ ಪೊಲೀಸ್ ಅಧಿಕಾರಿ ಡಿ.ವಿ. ಗುರುಪ್ರಸಾದ್ ಇಲ್ಲಿ ಮಾಡಿಕೊಟ್ಟಿದ್ದಾರೆ.

ಅಪರಾಧ ಹಾಗೂ ಅಪರಾಧಿಗಳ ವೈಭವೀಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಗುರುಪ್ರಸಾದ್ ಕನ್ನಡದಲ್ಲಿ ಜನರಿಗೆ ಉಪಯುಕ್ತವಾಗುವ ಮಾಹಿತಿಗಳನ್ನು ಅದರ ಎಲ್ಲ ವಿವರಗಳೊಂದಿಗೆ ನೀಡಿದ್ದಾರೆ. ಇದರಲ್ಲಿ ಮುಂಬೈ ಮೇಲಿನ ದಾಳಿ, ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ‍್ ಅಪರಾಧ, ವಂಚಕರು, ನಕ್ಸಲರ ಕುರಿತಂತೆ ಇಲ್ಲಿ ಬರೆಯಲಾಗಿದೆ. ಇದರೊಂದಿಗೆ ಅವುಗಳ ಕುರಿತಂತೆ ಅವರ ಚಿಂತನೆಯನ್ನೂ ನಾವು ಮನಗಾಣಬಹುದು.

ಅಪರಾಧ, ಪೊಲೀಸರು ಹಾಗೂ ಕಾನೂನಿನ ಅರಿವು ಉಂಟುಮಾಡಬಹುದಾದ ಪುಸ್ತಕ ಇದು. ಇಲ್ಲಿರುವ 49 ಲೇಖನಗಳಲ್ಲಿ ಜನರಿಗೆ ಅರಿವು ಮೂಡಿಸುವ ಪೊಲೀಸ್ ಅಧಿಕಾರಿಯ ಕೆಲಸವನ್ನು ಗುರುಪ್ರಸಾದ್ ಯಶಸ್ವಿಯಾಗಿ ಮಾಡಿದ್ದಾರೆ.

ಶೀರ್ಷಿಕೆ: ಆತಂಕವಾದದ ಸವಾಲು (ಭದ್ರತೆ, ಸುರಕ್ಷತೆ ಹಾಗೂ ಪೊಲೀಸ್ ವಿಷಯಗಳ ಬಗ್ಗೆ ವೈಚಾರಿಕ ಲೇಖನಗಳು) ಲೇಖಕರು: ಡಾ. ಡಿ.ವಿ. ಗುರುಪ್ರಸಾದ್ ಪ್ರಕಾಶನ: ಸಪ್ನ ಬುಕ್ ಹೌಸ್ ಪುಟಗಳು:223 ಬೆಲೆ:ರೂ.110/-

ಕೃಪೆ : ಪ್ರಜಾವಾಣಿ

ಶಂಕರ ಮೊಕಾಶಿ ಪುಣೇಕರ ಅವರ ಬರಹಗಳು

scan0001

‘ಅವಧೇಶ್ವರಿ’, `ಗಂಗವ್ವ ಗಂಗಾಮಾಯಿ’,`ನಟ ನಾರಾಯಣ’ ದಂಥ ಕನ್ನಡದ ಪ್ರಮುಖ ಕಾದಂಬರಿಗಳನ್ನು ಬರೆದ ಶಂಕರ ಮೊಕಾಶಿ ಪುಣೇಕರ ಅನನ್ಯ ಒಳನೋಟಗಳ ವಿಮರ್ಶಕರೂ ಆಗಿದ್ದರು. ಅವರು ಭಾರತೀಯ ಸಂಸ್ಕ್ರತಿಯನ್ನು ಅಭ್ಯಸಿಸಿ ಬರೆದ ಲೇಖನಗಳು, ಕನ್ನಡ ಸಾಹಿತ್ಯದ ಕುರಿತಾದ ಅವರ ಲೇಖನಗಳು, ಕನ್ನಡ ಸಾಹಿತ್ಯದ ಕುರಿತಾದ ಅವರ ಲೇಖನಗಳು ತಮ್ಮ ವಿಶಿಷ್ಠ ಒಳನೋಟಗಳಿಂದಾಗಿಯೇ ಗಮನ ಸೆಳೆಯುತ್ತವೆ.

ಇಂಥ ಲೇಖಕನ ಲೇಖನಗಳನ್ನು ಒಂದೆಡೆ ತಂದಿದ್ದಾರೆ ಜಿ.ಬಿ.ಹರೀಶ್. ಇದರೊಂದಿಗೆ ಸುಮತೀಂದ್ರ ನಾಡಿಗ್, ಮಲ್ಲೇಪುರಂ ಜಿ. ವೆಂಕಟೇಶ್, ರಹಮತ್ ತರೀಕೆರೆಯವರು ಮಾಡಿದ ಅವರ ವ್ಯಕ್ತಿತ್ವವನ್ನು ಇಡಿಯಾಗಿ ಪ್ರಕಟಿಸುವ ಸಂದರ್ಶನಗಳನ್ನು ಗಮನಿಸಬಹುದು. ಇಲ್ಲಿ ಕೆಲವು ಕನ್ನಡದ ಕೃತಿಗಳ ಕುರಿತಾಗಿ ಮೊಕಾಶಿಯವರು ಬರೆದ ಬರಹಗಳೂ ಇವೆ.

ಮೊಕಾಶಿಯವರ ಲೇಖನಗಳಿಗೆ ವಿಭಿನ್ನವಾದ ವಿಮರ್ಶಾತ್ಮಕ ನೋಟಗಳು ಇವೆ. ಅದು ಅವರ `ವೇದ ಪುರಾಣ – ಮಹಾಕಾವ್ಯ’, `ಕಾವ್ಯದಲ್ಲಿ ಸ್ಮೃತಿ, ಬುದ್ಧಿ ಹಾಗೂ ಸಾಂಗತಿಕ ಪ್ರಜ್ಞೆ’, `ಭಾಷಾ ಬೋಧನೆಯಲ್ಲಿ ಚಾಮ್ ಸ್ಕಿ – ಸ್ಕಿನ್ನರ‍್ ಪ್ರಾಯೋಗಿಕ ವಿಧಾನ’ದಂತಹ ಅನೇಕ ಲೇಖನಗಳಲ್ಲಿ ಕಾಣುತ್ತದೆ. ಶಂಕರ ಮೊಕಾಶಿ ಪುಣೇಕರರ ಲೇಖನಗಳನ್ನು ಓದುವುದೆಂದರೆ ಅದೊಂದು ಬೇರೆಯಾದ ದರ್ಶನವನ್ನು ನೀಡುವ ಪ್ರಯಾಣವೇ

ಶೀರ್ಷಿಕೆ: ನೀರಬೆಳಗು (ಶಂಕರ ಮೊಕಾಶಿ ಪುಣೇಕರ ಅವರ ಬರಹಗಳು) ಸಂ:ಜಿ.ಬಿ.ಹರೀಶ ಪ್ರಕಾಶಕರು:ಸಪ್ನ ಬುಕ್ ಹೌಸ್ ಪುಟ:360 ಬೆಲೆ:ರೂ.175/-

ಕೃಪೆ: ಪ್ರಜಾವಾಣಿ

ಹಲವು ನೆನಪುಗಳನ್ನು ಮೀಟುವಂತಹ . . .

srijanasheela-vycharikathe1

ಸಾಹಿತ್ಯದ ಕುರಿತ ಬರಹಗಳು, ವ್ಯಕ್ತಿಚಿತ್ರಗಳು, ಭಾಷಣಗಳು, ಅನುಭವ ಬರಹಗಳು, ಪುಸ್ತಕ ಪ್ರತಿಕ್ರಿಯೆ, ಸಾಮಾಜಿಕ-ಸಾಂಸ್ಕೃತಿಕ ಚಿಂತನೆಗಳು, ಸಂದರ್ಶನಗಳು – ಹೀಗೆ ವಿವಿಧ ಸ್ವರೂಪದ ನಲವತ್ತು ಬರಹಗಳ ಸಂಕಲನ `ಸೃಜನಶೀಲ ವೈಚಾರಿಕತೆ‘. ಇವುಗಳನ್ನೆಲ್ಲ ವಿಮರ್ಶಾ ಲೇಖನಗಳು ಎಂದು ಪುಸ್ತಕದ ಮುಖಪುಟದಲ್ಲಿ ಕರೆಯಲಾಗಿದೆ.

ಸಂಕಲನದ ಬಹುತೇಕ ಲೇಖನಗಳು ಲೇಖಕರ ಒಡನಾಟಕ್ಕೆ ದೊರಕಿದ ಸಾರಸ್ವತ ಲೋಕದ ಗಣ್ಯರ ಕುರಿತ ನುಡಿಚಿತ್ರಗಳಿಗೆ ಮೀಸಲಾಗಿವೆ. ವೈಕಂ ಮಹಮದ್ ಬಷೀರ್, ಗೋರೂರು, ಕರೀಂಖಾನ್, ಬೆಸಗರಹಳ್ಳಿ ರಾಮಣ್ಣ, ವಿಜಯಾದಬ್ಬೆ, ಕೆಂಗಲ್, ಕುವೆಂಪು, ಪೂರ್ಣಚಂದ್ರ ತೇಜಸ್ವಿಯಿಂದ ಹಿಡಿದು ಕಿರಿಯ ಗೆಳೆಯರ ಕುರಿತು ಕಾಳೇಗೌಡರು ಬರೆದಿದ್ದಾರೆ. ಈ ಬರಹಗಳಿಗೆ ಆಪ್ತತೆಯ ಗುಣವಿದೆ. ಬೆಸಗರಹಳ್ಳಿ ಅವರ ಕುರಿತ ಬರಹವಂತೂ ಹಲವು ನೆನಪುಗಳನ್ನು ಮೀಟುವಂತಹದ್ದು.

`ಸೃಜನಶೀಲ ವೈಚಾರಿಕತೆ‘, `ಸಾಹಿತ್ಯದಿಂದ ಏನು ಪ್ರಯೋಜನ?’, `ಸಾಹಿತ್ಯದ ಜವಾಬ್ದಾರಿ‘, ಲೇಖನಗಳು ಬರಹದ ಸೃಜನಶೀಲ ಸಾಧ್ಯತೆಗಳ ವಿಶ್ಲೇಷಣೆ ಆಗಿರುವಂತೆಯೇ ಬರಹಗಾರನ ಆತ್ಮವಿಶ್ಲೇಷಣೆಯ ಸಾಧ್ಯತೆಗಳೂ ಆಗಿರುವುದು ವಿಶೇಷ. `ಜೀವನ ಪ್ರೀತಿ‘, ಹಂಚುಣ್ಣುವ ಉದಾರಗುಣಬರಹಗಳಿಗೆ ಪ್ರಬಂಧದ ಚೌಕಟ್ಟಿದೆ.

ಕಾಳೇಗೌಡರ ವಿಚಾರ-ಅನುಭವಗಳ ಹಿನ್ನೆಲೆಯಲ್ಲಿ ಹಲವು ಬರಹಗಳು ಇಷ್ಟವಾದರೂ, ಪುಸ್ತಕದಲ್ಲಿ ಪ್ರಕಾಶಕರ ತುರ್ತು ಎದ್ದು ಕಾಣುತ್ತದೆ. ಲೇಖಕರ ಮಾತಿಗೆ ಕೂಡ ಆಸ್ಪದವಿಲ್ಲದೆ ಹೋಗಿರುವುದರಿಂದ ಪುಸ್ತಕದ ಪ್ರವೇಶ ಒಂದು ರೀತಿ ಕಲಸುಮೇಲೋಗರ ಎನ್ನಿಸುತ್ತದೆ. ಬರಗೂರು ರಾಮಚಂದ್ರಪ್ಪ ಹಾಗೂ ಬಿ. ಚಂದ್ರೇಗೌಡರು ಯಾವುದೋ ಸಂದರ್ಭದಲ್ಲಿ ಮಾಡಿದ ಕಾಳೇಗೌಡರ ಸಂದರ್ಶವನ್ನು ಈ ಪುಸ್ತಕದಲ್ಲಿ ಬಳಸಿಕೊಂಡಿರುವ ಔಚಿತ್ಯ ಅರ್ಥವಾಗುವುದಿಲ್ಲ. ಲೇಖನಗಳ ಕೊನೆಯಲ್ಲಿ ಬರವಣಿಯ ದಿನಾಂಕವನ್ನು ನಮೂದಿಸಲಾಗಿದೆ. ಆದರೆ, ಸ್ಥಳ-ಸಂದರ್ಭದ ಉಲ್ಲೇಖವಿಲ್ಲ.

ಲೇಖನಗಳಿದೆ ಪೂರಕವಾಗಿ ಬಳಸಿಕೊಂಡಿರುವ ರೇಖಾಚಿತ್ರಗಳು ಆಕರ್ಷಕವಾಗಿವೆ. ಅಂತೆಯೇ, ಪ್ರತಿ ಲೇಖನದ ಆರಂಭದಲ್ಲಿ ಲೇಖಕರ ರೇಖಾಚಿತ್ರ ಬಳಸಿಕೊಳ್ಳಲಾಗಿದೆ. ಇದು ಕೂಡ ಸೃಜನಶೀಲ ಪ್ರಯೋಗವಾ?

ಶೀರ್ಷಿಕೆ: ಸೃಜನಶೀಲ ವೈಚಾರಿಕತೆ ಲೇಖಕರು: ಪ್ರೊ. ಕಾಳೇಗೌಡ ನಾಗವಾರ ಪ್ರಕಾಶಕರು: ಸಪ್ನ ಬುಕ್ ಹೌಸ್ ಪುಟಗಳು:256 ಬೆಲೆ:ರೂ.125/-

ಕೃಪೆ : ಪ್ರಜಾವಾಣಿ

ಕಾರ್ನಾಡರ ಕುರಿತ ಎತ್ತರದ ಚರ್ಚೆ

girish-karnaad

ಸ್ವಾತಂತ್ರ್ಯೋತ್ತರ ಭಾರತದ ಮುಖ್ಯ ನಾಟಕಕಾರರಲ್ಲಿ ಗಿರೀಶ್ ಕಾರ್ನಾಡರು ಪ್ರಮುಖರು. ಅವರ ತುಘಲಕ್ ಮತ್ತು ನಾಗಮಂಡಲ ನಾಟಕಗಳು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿವೆ. ಇಷ್ಟಿದ್ದರೂ ಕನ್ನಡ ವಿಮರ್ಶೆ ಎಲ್ಲೋ ಒಂದು ಕಡೆ ಅವರನ್ನು ನಿರ್ಲಕ್ಷಿಸಿಕೊಂಡು ಬಂದಿದೆ ಎಂಬ ಭಾವ ನನ್ನಂಥವರಲ್ಲಿ ನಿಧಾನವಾಗಿ ಮೂಡುತ್ತಿವೆ. ಇದೀಗ 70 ದಾಟಿರುವ (ಜನನ: ಮೇ 19, 1938) ಅವರ ಎಲ್ಲಾ ಕೃತಿಗಳನ್ನು ಸಮಗ್ರವಾಗಿ ವಿಶ್ಲೇಷಿಸುವ, ಪರಿಚಯಿಸುವ (ಕನಿಷ್ಠ ಅಭಿನಂದನಾ ಗ್ರಂಥ ರೂಪದಲ್ಲಾದರೂ) ಒಂದಾದರೂ ಮಹತ್ವದ ಗ್ರಂಥವೊಂದನ್ನು ನಮಗೆ ಇದುವರೆಗೆ ಹೊರತರಲಾಗಲಿಲ್ಲ. ಸಾಮಾನ್ಯ ಬರಹಗಾರರ ಬಗೆಗೆ ಬೃಹತ್ ಗ್ರಂಥಗಳು ಪ್ರಕಟವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂಥ ಗೈರು ಹಾಜರಿಯು ನಮ್ಮ ಸಾಹಿತ್ಯದ ವಾತಾವರಣ ಅಷ್ಟೇನೂ ಆರೋಗ್ಯಕರವಾಗಿಲ್ಲ ಎಂಬುದನ್ನು ಸೂಚಿಸುತ್ತದೆ.

ಇಂಥ ನಿರಾಶಾದಾಯಕ ವಿಮರ್ಶನ ಸಂದರ್ಭದಲ್ಲಿ ಡಾ.ಸಿ.ಎನ್.ರಾಮಚಂದ್ರನ್ ಅವರು ಕಾರ್ನಾಡರ ಬಗೆಗೆ ಪ್ರಸ್ತುತ ಪುಸ್ತಕವನ್ನು ಪ್ರಕಟಿಸಿ, ಕೊರತೆಯೊಂದನ್ನು ನೀಗಿಸಲು ಪ್ರಯತ್ನಿಸಿದ್ದಾರೆ.

ಈ ಕೃತಿಯ ಏಳು ಅಧ್ಯಾಯಗಳಲ್ಲಿ ಪ್ರಮುಖವಾಗಿ ಮೂರು ವಿಷಯಗಳ ಕುರಿತು ವಿವರಗಳಿವೆ. ಮೊದಲನೆಯ ಮುಖ್ಯ ವಿಷಯವೆಂದರೆ, ಆರಂಭದಲ್ಲಿ ನೀಡಲಾದ ಕಾರ್ನಾಡರ ಜೀವನ ವಿವರಗಳು. ಎರಡನೆಯದು ಇತಿಹಾಸ ಚರಿತ್ರೆಗಳ ಬಗೆಗಣ ನಮ್ಮ ಅಪಕಲ್ಪನೆಗಳ ಕುರಿತಾದ ಚರ್ಚೆ ಮತ್ತು ಕೊನೆಯದಾಗಿ ಕಾರ್ನಾಡರು ಬರೆದ ತುಘಲಕ್, ತಲೆದಂಡ ಹಾಗೂ ಟಿಪ್ಪು ಸುಲ್ತಾನ್ ಕಂಡ ಕನಸು ಈ ಮೂರು ಚಾರಿತ್ರಿಕ ನಾಟಕಗಳ ವಿಶ್ಲೇಷಣೆ.

ಮೊದಲನೆಯ ವಿಷಯಕ್ಕೆ ಸಂಬಂಧಿಸಿದಂತೆ, ಲೇಖಕರು ಕಾರ್ನಾಡರ ಬಗೆಗೆ ನಮಗೆ ಗೊತ್ತಿಲ್ಲದ ಅನೇಕ ವಿವರಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಇದಕ್ಕಾಗಿ ಅವರು ಕಾರ್ನಾಡರನ್ನು ನೇರವಾಗಿ ಸಂದರ್ಶಿಸಿದ್ದಾರೆ. ಅವರ ಬಗೆಗೆ ಕನ್ನಡದಲ್ಲಿ – ಇಂಗ್ಲೀಷಿನಲ್ಲಿ ಪ್ರಕಟವಾದ ಲೇಖನ ಹಾಗೂ ಗ್ರಂಥಗಳನ್ನು ಪರಾಮರ್ಶಿಸಿದ್ದಾರೆ. ಕಾರ್ನಾಡರನ್ನು ಹತ್ತಿರದಿಂದ ಬಲ್ಲ ಗೆಳೆಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. 20ನೇ ಶತಮಾನದ ಉತ್ತರಾರ್ಧದ ಭಾರತೀಯ ಸಾಂಸ್ಕೃತಿಕ ಲೋಕದ ಒಳಸುಳಿವುಗಳನ್ನು ಕಾರ್ನಾಡರ ಮೂಲಕ ಅರ್ಥ ಮಾಡಿಕೊಳ್ಳ ಬಯಸುವವರಿಗೆ ಇಲ್ಲಿನ ವಿಷಯಗಳು ಬಹುವಾಗಿ ಸಹಕರಿಸಬಲ್ಲುವು.

ಎರಡನೇ ವಿಷಯಕ್ಕೆ ಸಂಬಂಧಿಸಿದಂತೆ ರಾಮಚಂದ್ರನ್ ಅವರು ತಮ್ಮ ವ್ಯಾಪಕ ಓದಿನ ಬಲದಿಂದ ಕಾರ್ನಾಡರ ಚಾರಿತ್ರಿಕ ನಾಟಕಗಳ ಸ್ಥಾನ ನಿರ್ದೇಶನ ಮಾಡಲು ಅನುಕೂಲಕರವಾಗುವಂಥ ಬೃಹತ್ ಚೌಕಟ್ಟೊಂದನ್ನು ನಿರ್ಮಿಸಿಕೊಡುತ್ತಾರೆ. `ಕಾರ್ನಾಡರು ಎಂಥ ನಾಟಕಕಾರರು? ಅವರ ನಾಟಕಗಳ ಮೂಲ ಪ್ರೇರಣೆಗಳೇನು‘ (ಪು:20) ಎಂಬಂಥ ಪ್ರಶ್ನೆಗಳನ್ನು ಕೇಳಿಕೊಂಡ ಲೇಖಕರು, ಕಾರ್ನಾಡರನ್ನು ಪ್ರಭಾವಿಸಿರಬಹುದಾದ ಪರಂಪರೆ, ಪುರಾಣಗಳು, ಜಾನಪದ, ನವ್ಯ ಸಾಹಿತ್ಯ, ವರ್ಣಾಶ್ರಮ ಧರ್ಮ ಮತ್ತಿತರ ವಿಷಯಗಳನ್ನು ಕೂಲಂಕಷವಾಗಿ ಚರ್ಚಿಸುತ್ತಾರೆ, ಚರಿತ್ರೆ-ಇತಿಹಾಸಗಳ ಬಗೆಗಣ ನಮ್ಮ ತಿಳುವಳಿಕೆಯನ್ನು ಪರಿಷ್ಕರಿಸಿಕೊಳ್ಳಲು ಒತ್ತಾಯಿಸುತ್ತಾರೆ. `ಚರಿತ್ರೆಯೆಂಬ ಜ್ಞಾನ ಮಾರ್ಗಗತವನ್ನು ಕುರಿತ ಕಥನವಾದರೂ ಅದರ ಲಕ್ಷ್ಯ ವರ್ತಮಾನವೇ (ಪು:53) ಎಂಬಂಥ ಆರೋಗ್ಯಕರವಾದ ತೀರ್ಮಾನದ ಹಿನ್ನೆಲೆಯಲ್ಲಿ ಅವರು ಕಾರ್ನಾಡರ ಚಾರಿತ್ರಿಕ ನಾಟಕಗಳ ವಿಮರ್ಶೆ-ವ್ಯಾಖ್ಯಾನಗಳನ್ನು ಮುಂದುವರೆಸುತ್ತಾರೆ.

ಕೃತಿಯ ಮುಖ್ಯ ಶರೀರವಾದ ನಾಲ್ಕು, ಐದು ಮತ್ತು ಆರನೇ ಅಧ್ಯಾಯಗಳಲ್ಲಿ ಕಾರ್ನಾಡರ ಚಾರಿತ್ರಿಕ ನಾಟಕಗಳ ಗಂಭೀರ ವಿಶ್ಲೇಷಣೆಯ ಸಂದರ್ಭದಲ್ಲಿ ಸಿ.ಎನ್.ಆರ್. ಅವರು ಕಾರ್ನಾಡರ ಚಾರಿತ್ರಿಕ ನಾಟಕಗಳಿಗೆ ಸಂವಾದಿಯಾಗಿ ಭಾರತೀಯ ಭಾಷೆಗಳಲ್ಲಿ ಹಾಗೂ ಪಾಶ್ಚಾತ್ಯ ಭಾಷೆಗಳಲ್ಲಿ ಬಂದಿರುವ ಅನೇಕ ಕೃತಿಗಳನ್ನು ಪರಿಶೀಲಿಸಿ, ಕಾರ್ನಾಡರ ನಾಟಕಗಳು ಅವುಗಳಿಗಿಂತ ಹೇಗೆ ಭಿನ್ನವಾಗಿವೆ ಎಂದು ಸ್ಪಷ್ಟಪಡಿಸುತ್ತಾರೆ. ಹೀಗಾಗಿ ಚರ್ಚೆಯ ಸಂದರ್ಭದಲ್ಲಿ ತಾನೇ ತಾನಾಗಿ ಕಮೂ, ನೆಹರೂ, ಸಫೊಕ್ಲಿಸ್, ಗೋಪಾಲ ಕೃಷ್ಣ ಅಡಿಗ, ವೃಂದಾವನಲಾಲ್ ವರ್ಮ, ಚೋ ರಾಮಸ್ವಾಮಿ, ಸಂಪ, ಬರನಿ, ವಿಜಯ ತೆಂಡೂಲ್ಕರ್, ಬಿ.ವಿ. ಕಾರಂತ, ಆನ್ವಿ, ಎಚ್.ಎಸ್.ಶಿವಪ್ರಕಾಶ್, ರಾಮಾನುಜನ್, ವಿಶ್ವಾಸ್ ಪಾಟೀಲ್, ಮತ್ತಿತರರೆಲ್ಲಾ ಹಾಯ್ದು ಹೋಗುತ್ತಾರೆ. ಎಷ್ಟೋ ಬಾರಿ ಈ ವಿಶಾಲ ಚೌಕಟ್ಟಿನ ಭಾರದಿಂದ ಕಾರ್ನಾಡರ ಬಗೆಗಣ ಓದು ಕುಸಿದು ಹೋಗುತ್ತಿರುವಂತೆ ಭಾಸವಾಗುತ್ತದೆ. ಕಾರ್ನಾಡರ ನಾಟಕಗಳು ಗೌಣವಾಗಿ ಇತರರೇ ವಿಜೃಂಭಿಸುವಂತೆ ತೋರುತ್ತದೆ. ಇಷ್ಟಿದ್ದರೂ ಕನ್ನಡದ ನಿರ್ದಿಷ್ಟ ನಾಟಕವೊಂದು ಜಗತ್ತಿನ ಇತರೆಡೆಯ ನಾಟಕಗಳಿಗಿಂತ ಹೇಗೆ ಅನನ್ಯವಾಗಿದೆ ಎಂಬುದನ್ನು ಮರೆಯುವಂತಿಲ್ಲ.

ರಾಮಚಂದ್ರನ್ ಅವರು ಕಾರ್ನಾಡರ ಕುರಿತಾದ ಚರ್ಚೆಗಳನ್ನು ಬೇರೆ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತೀಯ ರಂಗಭೂಮಿಯ ಉತ್ಥಾನಕ್ಕೆ ಗಿರೀಶರ ಕೊಡುಗೆಯನ್ನು ಅವರು ಸಾಧಾರವಾಗಿ ಸ್ಥಾಪಿಸಿದ್ದಾರೆ.

ಡಾ. ಪುರುಷೋತ್ತಮ ಬಿಳಿಮಲೆ

ಶೀರ್ಷಿಕೆ: ಗಿರೀಶ್ ಕಾರ್ನಾಡ್ ಮತ್ತು ಅವರ ಮೂರು ಚಾರಿತ್ರಿಕ ನಾಟಕಗಳು (ಸುವರ್ಣ ಸಿರಿ ಮಾಲೆ) ಲೇಖಕರು: ಡಾ. ಸಿ.ಎನ್.ರಾಮಚಂದ್ರನ್ ಪ್ರಕಾಶಕರು: ಸಪ್ನ ಬುಕ್ ಹೌಸ್ ಪುಟಗಳು:124 ಬೆಲೆ:ರೂ.60/-

ಕೃಪೆ : ಪ್ರಜಾವಾಣಿ

ಅನ್ಯೋನ್ಯ

anyonya

ಜಿ.ಎನ್.ಆರ್. ಅವರ ಈ ವಿಮರ್ಶಾ ಕೃತಿಯ ವೈಶಿಷ್ಟ್ಯವೆಂದರೆ, ಅನಂತಮೂರ್ತಿಯವರ `ಭವ್ಯ‘, ಕುಂವೀ ಅವರ `ಅರಮನೆಯಂತಹ ಲೇಟೆಸ್ಟ್ ಕೃತಿಗಳ ಕುರಿತು ಬರಹಗಳಿರುವುದು. ಯಾವ ತೂಕದ ವಿಮರ್ಶಾ ಕೃತಿ ತೆಗೆದುಕೊಂಡರೂ ಅದರಲ್ಲಿನ್ನೂ ಯಶೋಧರನ ಜನ್ನ ಚರಿತ್ರೆ, ಆನಂದಕಂದರ ಕತೆಗಳು ಮುಂತಾದ ತಲೆಬರಹಗಳನ್ನೂ ನೋಡಿ ಬೇಜಾರು ಬರುತ್ತಿರುವಾಗ ಇಂತಹದೊಂದು ಪ್ರಸ್ತುತತೆ ಅವಶ್ಯ.

ರಂಗನಾಥರಾವ್ ಪತ್ರಿಕೆಯೊಂದರ ಪುರವಣಿ ಸಂಪಾದಕರೂ ಆಗಿದ್ದ ಕಾರಣ ಹೀಗೆ ಪ್ರೆಸ್ ನಿಂದ ಹೊರಬೀಳುವ ಗರಿ ಗರಿ ಕಾದಂಬರಿಗಳ ಕಡೆ ಅವರ ಗಮನ ಹರಿದಿದ್ದೀತು. ಆದರೆ ಅವರ ಶೈಲಿ ಮಾತ್ರ ಗರಿ ಗರಿಗೆ ವಿರುದ್ಧವಾಗಿದೆ. ಅಂದರೆ ಸಾಮಾನ್ಯೀಕರಣದ ಪದಗಳಿಂದ, ಚಿಂತನೆಗಳಿಂದ, ಹಿಂದೆ-ಮುಂದೆ ಯಾವ ಅರ್ಥ ವಿನ್ಯಾಸ, ಭಾವ ವಿಸ್ತಾರಗಳನ್ನೂ ಹೊಂದಿರದ ಚುಟುಕು ವಾಕ್ಯಗಳಿಂದ ಕುಗ್ಗಿದೆ. ಉದಾಹರಣೆಗಾಗಿ ನೀವೆಲ್ಲ ಓದಿರಬಹುದಾದ ವಿವೇಕ ಶಾನಭಾಗರ ಇತ್ತೀಚಿನ ಕಾದಂಬರಿ `ಒಂದು ಬದಿ ಕಡಲುಕುರಿತು ಜಿ.ಎನ್.ಆರ್. ಹೀಗೆ ಬರೆಯುತ್ತಾರೆ: ಕಾದಂಬರಿ ಸಾಂಪ್ರದಾಯಿಕ ಪರಿಕಲ್ಪನೆಯಲ್ಲಿ ವಿಮರ್ಶೆಯ ನೆರವಿಗೆ ಒದಗಿಬರುವ ಸೂತ್ರಬದ್ಧ ಕತೆಯಾಗಲೀ, ಕಪ್ಪು-ಬಿಳುಪು-ವರ್ಣರಂಜಿತ ಪಾತ್ರಗಳಾಗಲೀ, ಗೊತ್ತು ಗುರಿಗಳಾಗಲೀ, ಇವು ಯಾವುದೂ ಇಲ್ಲಿ ಢಾಳವಗಿ ಗೋಚರಿಸುವುದಿಲ್ಲ! (ಆಶ್ಚರ್ಯಸೂಚಕ ಚಿಹ್ನೆ ನಾವು ಹಾಕಿದ್ದು).

ಶೀರ್ಷಿಕೆ: ಅನ್ಯೋನ್ಯ ಲೇಖಕರು: ಜಿ.ಎನ್.ರಂಗನಾಥ ರಾವ್ ಪ್ರಕಾಶಕರು: ಸಪ್ನ ಬುಕ್ ಹೌಸ್ ಪುಟಗಳು: 172 ಬೆಲೆ: ರೂ.85/-

ಕೃಪೆ : ವಿಜಯ ಕರ್ನಾಟಕ