ಶಿಕ್ಷಣದ ಮೂಲಕ ಬದಲಾವಣೆ

leriyonka

ಹೊಸ ಪೀಳಿಗೆಯಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳ ಶಿಕ್ಷಕ ವೃತ್ತಿಗೆ ಹೊರತಾದ ವಿಭಿನ್ನ ಕ್ಷೇತ್ರಗಳಲ್ಲಿದ್ದು ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡಿರುವ ಯುವಕರ ಬರವಣಿಗೆಗಳನ್ನು ಐದು ವರ್ಷಗಳಿಂದ ಪ್ರಕಟಿಸುತ್ತಿರುವ ಛಂದ ಪುಸ್ತಕ ಹೊರತಂದ ಕೃತಿ ಇದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಹುದ್ದೆಯಲ್ಲಿದ್ದು ಸದ್ಯ ಪೂರ್ವ ಆಫ್ರಿಕಾದ ತಾಂಜಾನಿಯದಲ್ಲಿ ವಾಸವಿರುವ ಪ್ರಶಾಂತ್ ಬೀರೂರು ಚಿಕ್ಕಣ್ಣ ದೇವರು (ಪ್ರಶಾಂತ್ ಬೀಚಿ) ಅವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಮೂಲ ಲೇಖಕ ಹೆನ್ರಿ ಆರ್. ಓಲೆ ಕುಲೆಟ್ ಕೀನ್ಯಾ ದೇಶದ ಜನಪ್ರಿಯ ಕಾದಂಬರಿಕಾರ. ಆಫ್ರಿಕಾದ ಬುಡಕಟ್ಟುಗಳಲ್ಲಿ ಒಂದಾದ ಮಾಸಯಿ ಬುಡಕಟ್ಟಿನ ಬಾಲಕನೊಬ್ಬ ಶಾಲಾ ಶಿಕ್ಷಣ ಪಡೆಯಲು ನಗರಕ್ಕೆ ಹೋಗುವ ಮತ್ತು ನಗರದಲ್ಲಿ ಕೆಲವು ವರ್ಷ ಪಡೆಯುವ ಅನುಭವಗಳನ್ನು ಈ ಕಾದಂಬರಿ ಒಳಗೊಂಡಿದೆ.

ಶಿಕ್ಷಣವೆಂಬ ಪ್ರಪಂಚಕ್ಕೆ ಪ್ರವೇಶವೇ ಇಲ್ಲದ ತಳವರ್ಗದ ನೂರಾರು ಸಮುದಾಯಗಳು ಇತ್ತೀಚಿನವರೆಗೂ ಭಾರತದಲ್ಲಿ ಇದ್ದ ಹಿನ್ನೆಲೆಯಲ್ಲಿ ಆಫ್ರಿಕದ ಬುಡಕಟ್ಟಿನ ಈ ಕಥಾನಕ ಕನ್ನಡ ಓದುಗರಿಗೆ ಪ್ರಸ್ತುತವೆನಿಸುತ್ತದೆ. ಹೆನ್ರಿ ಕುಲೆಟ್ ಅವರ ಮೊದಲ ಕಾದಂಬರಿ `ಈಸ್ ಇಟ್ ಪಾಸಿಬಲ್ದ (1971) ಅನುವಾದವಿದು. ಇದು ಯೂರೋಪಿನ ಆಧುನಿಕತೆಯ ಎದುರು ಆಫ್ರಿಕಾದ ಸ್ಥಳೀಯ ಸಮುದಾಯಗಳು ಶಿಕ್ಷಣದ ಮೂಲಕ ಮುಖಾಮುಖಿ ಆದಾಗ ಉಂಟಾಗುವ ಸಮಸ್ತ ತಲ್ಲಣದ ಚಿತ್ರಣವೆಂದು ಬೆನ್ನುಡಿಯಲ್ಲಿ ವಿಮರ್ಶಕ ರಹಮತ್ ತರೀಕೆರೆ ಬಣ್ಣಿಸಿದ್ದಾರೆ. ಶಿಕ್ಷಣದ ಮೂಲಕ ಹೊಸ ಪ್ರಪಂಚವೊಂದನ್ನು ಕಂಡುಕೊಳ್ಳುವ ಬೆರಗು ಕ್ರಮೇಣ ಜಾಗೃತಿಯನ್ನು ಮೂಡಿಸಿ ಸ್ವತಂತ್ರ ಅಸ್ತಿತ್ವಕ್ಕಾಗಿ ತಹತಹಿಸುವ ಸ್ಥಿತಿಯನ್ನು ಮುಟ್ಟಿಸುವುದರ ಪರಿವರ್ತನೆಯ ಚಿತ್ರಣವೂ ಇಲ್ಲಿದೆ.

ದನ ಕರುಗಳ ಪೋಷಣೆಯ ಮೂಲಕವೇ ಬದುಕನ್ನು ರೂಪಿಸಿಕೊಂಡು ತಮ್ಮಷ್ಟಕ್ಕೆ ಸಂತೃಪ್ತಿಯಿಂದಿದ್ದ ಬುಡಕಟ್ಟು ಸಮುದಾಯಕ್ಕೆ ಆಧುನಿಕ ಶಿಕ್ಷಣ ಕೊಡುವ ಮೂಲಕ ಆಧುನಿಕತೆಯನ್ನು ಪರಿಚಯಿಸುವ ಪ್ರಯತ್ನ ಅವರಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನೂ, ತಮ್ಮ ಮೇಲೆ ಹೇರಲಾಗಿರುವ ಹೊರಗಿನವರ ಆಳ್ವಿಕೆಯನ್ನು ಪ್ರತಿಭಟಿಸುವ ಧೈರ್ಯವನ್ನೂ ನೀಡುವುದು ಭಾರತದ ಮಟ್ಟಿಗೂ ನಿಜವಾದ ಸಂಗತಿ. ಲೇರಿಯೋಂಕನೆಂಬ ಮಾಸುಯಿ ಬುಡಕಟ್ಟಿನ ಹುಡುಗನ ಆತ್ಮಕತೆಯಂತೆ ಸಾಗುವ ಈ ಬದುಕಿನ ಪಯಣ ಕೀನ್ಯಾ, ನೈರೋಬಿಯಂಥ ನಗರಗಳವರೆಗೆ, ಬಹುಕಾಲದಿಂದ ಪರಕೀಯರ ಆಡಳಿತದಲ್ಲಿದ್ದವರು ತಮ್ಮನ್ನು ತಾವೇ ನೋಡಿಕೊಳ್ಳುವ ಸಾಮರ್ಥ್ಯ ಪಡೆದಿರುವುದಾಗಿ ಹೇಳಿಕೊಳ್ಳುವವರೆಗೆ ಮುಂದುವರೆದಿದೆ. ಕಾಡಿನ ಹುಡುಗನ ಓದಿನ ಹಾದಿಯ ಮೂಲಕ ಒಂದು ಪ್ರಾದೇಶಿಕ ಸಮುದಾಯ ಪರಕೀಯರ ಆಡಳಿತ ಎದುರು ಸ್ವಾತಂತ್ರ್ಯಕ್ಕಾಗಿ ಎಚ್ಚೆತ್ತುಕೊಳ್ಳುವ ಪರಿಯನ್ನೂ ಇಲ್ಲಿ ಗಮನಿಸಬಹುದಾಗಿದೆ.

ರಸ್ತೆ ಸೌಲಭ್ಯ, ವಾಹನ ಸಂಚಾರಗಳ ಅರಿವು ಇರುವವರಿಗೆ ಇಡೀ ದಿನ ಮತ್ತು ರಾತ್ರಿಯೆಲ್ಲ ನಡೆಯುತ್ತಲೇ ಹಿಂದೆಂದೂ ನೋಡದ ಊರನ್ನು ಪತ್ತೆ ಮಾಡುವ ಲೇರಿಯೋಂಕನ ಸಾಹಸ ನಮ್ಮ ಜಾನಪದ ಕಥೆಗಳ ಸಾಹಸಿ ರಾಜಕುಮಾರರ ಕಥೆಗಳನ್ನು ನೆನಪಿಸಬಲ್ಲದು. ಒಂದು ಕೈಯಲ್ಲಿ ಭರ್ಜಿಯನ್ನೂ ಇನ್ನೊಂದು ಕೈಯಲ್ಲಿ ಪುಸ್ತಕವನ್ನೂ ಹಿಡಿದುಕೊಂಡು ಸಮತೋಲನ ಕಾಯ್ದುಕೊಳ್ಳುವುದು ಸಾಧ್ಯ ಎಂಬುದು ಲೇರಿಯೋಂಕ ಮತ್ತು ಲಿವಿಂಗ್ಸ್ಟೋನ್ ಪಾತ್ರಗಳ ಮೂಲಕ ಪ್ರತಿಪಾದಿಸಲಾಗಿದ್ದರೂ ಈ ಕಥಾನಕ ಅದಕ್ಕಿಂತಲೂ ಮುಂದೆ ಸಾಗಿ ತಳ ಸಮುದಾಯ ಶಿಕ್ಷಣದ ಮೂಲಕ ಬದಲಾವಣೆಗೆ ಸ್ಪಂದಿಸಲು ಸಿದ್ಧವಾಗುವ ಪರಿಯನ್ನು ಬಿಚ್ಚಿಡುತ್ತದೆ.

ವಿಷದ ಹಾವಿನಿಂದ ಕಚ್ಚಿಸಿಕೊಂಡು ಗಿಡಮೂಲಿಕೆ ಮದ್ದಿನಿಂದ ಗುಣವಾಗುವ, ಹೆಬ್ಬಾವಿನ ಹೊಟ್ಟೆ ಸೇರುವ ಸ್ಥಿತಿಯಲ್ಲಿದ್ದ ವ್ಯಕ್ತಿ ಬಚಾವಾಗಿ ಆಸ್ಪತ್ರೆ ಸೇರಿಕೊಳ್ಳುವಂತಹ ರೋಚಕ ಸನ್ನಿವೇಶಗಳೂ ಇಲ್ಲಿವೆ. ಮಾಸುಯಿ ಬುಡಕಟ್ಟು ಮಾತ್ರವಲ್ಲದೆ ಆಫ್ರಿಕದ ಮೂಲನಿವಾಸಿಗಳ ಆಚರಣೆ, ನಂಬಿಕೆ, ನಡವಳಿಕೆ, ಸಂಪ್ರದಾಯ, ಕುಟುಂಬ ವ್ಯವಸ್ಥೆ, ಜೀವನ ವಿಧಾನದ ಬಗೆಗೂ ಇಲ್ಲಿ ವಿವರಗಳಿವೆ. ಆಫ್ರಿಕಾದ ಕಾಡುಗಳಲ್ಲಿ ನಡೆದಿರುವ ಈ ಕಥಾನಕ ಅನೇಕ ವಿವರಗಳಲ್ಲಿ ಮಲೆನಾಡಿನ ಚಿತ್ರಗಳನ್ನೂ ಕಟ್ಟಿಕೊಡುತ್ತದೆ.

ಲಕ್ಷ್ಮಣ ಕೊಡಸೆ

ಶೀರ್ಷಿಕೆ: ಲೇರಿಯೋಂಕ ಲೇಖಕರು: ಮೂಲ: ಕೀನ್ಯಾ ಕಾದಂಬರಿಕಾರ ಹೆನ್ರಿ ಆರ್. ಓಲೆ ಕುಲೆಟ್ ಕನ್ನಡಕ್ಕೆ: ಪ್ರಶಾಂತ್ ಬೀಚಿ ಪ್ರಕಾಶಕರು: ಛಂದ ಪುಸ್ತಕ ಪುಟಗಳು:250 ಬೆಲೆ:ರೂ.100/-

ಕೃಪೆ : ಪ್ರಜಾವಾಣಿ