ನವಕರ್ನಾಟಕಕ್ಕೆ ಚಿನ್ನದ ಹಬ್ಬದ ಶುಭಾಶಯಗಳು


ಪುಸ್ತಕಗಳು ಸಾಯುವುದಿಲ್ಲ, ಉಸಿರಾಡುತ್ತವೆ

ಸಂದರ್ಶನ : ಸಂದೀಪ ನಾಯಕ
`ನವಕರ್ನಾಟಕ ಪ್ರಕಾಶನ’ ತನ್ನ ಐದು ದಶಕಗಳ ಪುಸ್ತಕ ಪ್ರಕಟಣೆಯಲ್ಲಿ ತಲೆಮಾರುಗಳ ಓದುವ ರುಚಿಯನ್ನು ಹೆಚ್ಚಿಸಿದೆ. ಕನ್ನಡದಲ್ಲಿ ಚಿಂತನೆ ಮಾಡುವುದನ್ನು ಯುವತಲೆಮಾರಿಗೆ ಕಲಿಸಿದೆ. ಕೇವಲ ಪುಸ್ತಕ ಪ್ರಕಟಣೆ ಮೂಲಕ ಸಾಧ್ಯವಾದ ಅಸಾಮಾನ್ಯ ಸಂಗತಿ ಇದು. ಕನ್ನಡದ ಈ ವಿಶಿಷ್ಟ ಪ್ರಕಾಶನದ ಒಂದು ಹೊರಳು ನೋಟ…

ಕನ್ನಡ ಪುಸ್ತಕಗಳ ಪ್ರಕಾಶನ ಸಂಸ್ಥೆಗಳಲ್ಲಿ ತನ್ನದೇ ಆದ ಅಚ್ಚನ್ನು ಓದುಗರ ಮನದಲ್ಲಿ ಮೂಡಿಸಿರುವ ನವಕರ್ನಾಟಕ ಪ್ರಕಾಶನಕ್ಕೆ ಈಗ ಐವತ್ತರ ಹರೆಯ. 1960ರಲ್ಲಿ ಆರಂಭವಾದ ನವಕರ್ನಾಟಕ `ಪುಸ್ತಕಗಳ ಮೂಲಕ ಮನುಕುಲದ ಸೇವೆ’ ಎಂಬ ತನ್ನ ಧ್ಯೇಯವಾಕ್ಯದಂತೆ ಕೆಲಸ ಮಾಡಲು ಪ್ರಯತ್ನಿಸಿದೆ. ಈವರೆಗೆ ಇಂಗ್ಲಿಷ್, ಹಿಂದಿ ಭಾಷೆಯ ಪುಸ್ತಕಗಳೂ ಸೇರಿದಂತೆ 2951 ಪುಸ್ತಕಗಳನ್ನು ಅದು ಪ್ರಕಟಿಸಿದೆ. ಪ್ರಾದೇಶಿಕ ಭಾಷೆಯ ಪ್ರಕಾಶನ ಸಂಸ್ಥೆಗಳಲ್ಲಿ ಈ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಿರುವುದು ಭಾರತದಲ್ಲಿ ಬಹುಶಃ ದಾಖಲೆಯೇ. ಪ್ರಕಾಶನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರವು 2006ರಲ್ಲಿ `ಅತ್ಯತ್ತಮ ಪ್ರಕಾಶನ ಸಂಸ್ಥೆ’ ಎಂಬ ಪ್ರಶಸ್ತಿ ನೀಡಿದೆ. ಕಳೆದ ಹತ್ತು ವರ್ಷಗಳಿಂದ `ಹೊಸತು’ ಎಂಬ ವಿಚಾರ ಪ್ರಧಾನವಾದ ಪತ್ರಿಕೆಯನ್ನು ಜಿ.ರಾಮಕೃಷ್ಣ ಸಂಪಾದಕತ್ವದಲ್ಲಿ ಪ್ರಕಟಿಸಲಾಗುತ್ತಿದೆ. `ನವಕರ್ನಾಟಕ’ ಚಿನ್ನದ ಹಬ್ಬದ ನೆಪದಲ್ಲಿ, ಪ್ರಕಾಶನದ ರೂವಾರಿ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಆರ್.ಎಸ್.ರಾಜಾರಾಮ್‌ರೊಂದಿಗೆ ಮಾತುಕತೆಯ ಆಯ್ದ ಭಾಗ.


ವಿಶ್ವಕಥಾಕೋಶ ಬಿಡುಗಡೆ ಮಾಡಿ ಮಾತನಾಡುತ್ತಿರುವ ಡಾ.ಹಾ.ಮಾ.ನಾಯಕ. ಬಿ.ವಿ.ಕಕ್ಕಿಲ್ಲಾಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕಥಾಕೋಶದ ಸಂಪಾದಕ, ನಿರಂಜನ ಇದ್ದಾರೆ.

* ಸಂಸ್ಥೆಯ ಆರಂಭದ ದಿನಮಾನಗಳು ಹೇಗಿದ್ದವು. ಅದರ ಹಿನ್ನೋಟ ಒಂದನ್ನು ಕೊಡಿ.

ಸ್ವಾತಂತ್ರ್ಯ ಹೋರಾಟಗಾರರು, ಶ್ರಮಜೀವಿ ಚಳವಳಿಗಳಲ್ಲಿ ತೊಡಗಿಸಿಕೊಂಡವರು, ಸಾಹಿತಿಗಳು, ಪತ್ರಕರ್ತರು, ಜನಪರ ಕಾಳಜಿಯಿದ್ದು ಸಮತಾವಾದಕ್ಕೆ ಬದ್ಧರಾಗಿದ್ದವರು ಈ ಸಂಘಟನೆಯ ರೂವಾರಿಗಳು. ಸ್ಥಾಪಕ ಅಧ್ಯಕ್ಷ ಬಿ.ವಿ.ಕಕ್ಕಿಲ್ಲಾಯರು. ಈಗ ಅವರಿಗೆ 91ರ ಹರೆಯ. ಸಂಸ್ಥೆಯಲ್ಲಿ ಈಗಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಸಂಸ್ಥೆಯ ಆರಂಭದಲ್ಲೇ ನನ್ನನ್ನು ಗುರುತಿಸಿ ಕರೆಸಿಕೊಂಡವರು.

ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಎಸ್.ಆರ್.ಭಟ್‌ರು. ಸರಳ- ಸಜ್ಜನಿಕೆಯ ಸ್ವಾತಂತ್ರ್ಯ ಹೋರಾಟಗಾರರು. ನಮ್ಮ ಪ್ರಾಚೀನ ಇತಿಹಾಸ, ಸಂಸ್ಕೃತಿ, ಪರಂಪರೆಗಳ ಆಳವಾದ ಅಧ್ಯಯನ, ವೇದೋಪನಿಷತ್ತುಗಳನ್ನು, ಸ್ಮೃತಿ-ಶಾಸ್ತ್ರಗಳನ್ನು ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಬಲ್ಲವರಲ್ಲಿ ಎಸ್.ಆರ್.ಭಟ್ ಒಬ್ಬರು.
ಸಂಘಟನೆಯನ್ನು ಕಟ್ಟುವಲ್ಲಿ, ಆಂತರಿಕ ಭಿನ್ನತೆಗಳನ್ನು ಹೋಗಲಾಡಿಸುವಲ್ಲಿ, ಸಂಸ್ಥೆಗೆ ಸ್ಥಿರತೆಯನ್ನು ತಂದುಕೊಡುವಲ್ಲಿ ಅವರ ಕೊಡುಗೆ ಅನನ್ಯವಾದದ್ದು. ಆರಂಭದಲ್ಲಿ ನಮ್ಮ ಕಾರ್ಯಪಡೆಯ ಸಂಖ್ಯೆ ಐದು. ಅವರ ಪೈಕಿ ಸಂಸ್ಥೆಯಲ್ಲಿ ಈಗ ಉಳಿದವ ನಾನೊಬ್ಬನೆ.

ಆಡಳಿತ ನಿರ್ವಹಣೆ, ಲೆಕ್ಕಪತ್ರ, ಪತ್ರಲೇಖನ, ಪುಸ್ತಕ ಖರೀದಿ, ಮಾರಾಟ ಇವೆಲ್ಲವುಗಳ ತರಬೇತಿ ಪಡೆದ ಐದು ವರ್ಷಗಳ ನಂತರ, ನಷ್ಟದಲ್ಲಿ ನಡೆಯುತ್ತಿದ್ದ ನಮ್ಮ ಮುದ್ರಣಾಲಯದ ಹೊಣೆಯನ್ನು ನನ್ನ ಹೆಗಲಿಗೇರಿಸಿದವರು ಭಟ್ಟರು. 1974ರಲ್ಲಿ `ಕೆಂಬಾವುಟ’ ವಾರಪತ್ರಿಕೆಗೆ ಸಂಪಾದಕರಾಗಿ ನಿಯೋಜಿಸಲ್ಪಟ್ಟ ಭಟ್ಟರು, ಸಂಸ್ಥೆಯ ಕಾರ್ಯದಂಡವನ್ನು ನನ್ನ ಕೈಗಿತ್ತು, ಮುಂದೆ ಅವರಿರುವವರೆಗೂ ನನಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಸಂಸ್ಥೆಯ ಪ್ರಗತಿಗೆ ಕಾರಣರಾದರು.

ಮೊದಲ 15 ವರ್ಷಗಳಲ್ಲಿ ಸಂಸ್ಥೆ ಪ್ರಕಟಣೆಗಳ ಸಂಖ್ಯೆ 15. ನಮ್ಮ ಮೊದಲ ಪ್ರಕಟಣೆ (1962) ಎನ್.ಸೀತಾರಾಮ ಶಾಸ್ತ್ರಿ ಅವರು ಅನುವಾದಿಸಿದ `ಲೆನಿನ್‌ನ ಆತ್ಮಕಥೆ’. ಅದಕ್ಕೆ ಕಲಾವಿದ ಆರ್.ಎಸ್.ನಾಯ್ಡು ಚಿತ್ರ ಬರೆದಿದ್ದರು.

* ನಿಮ್ಮ ಪ್ರಕಟಣೆಗಳಲ್ಲಿ ಯಾವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ  ನೀಡಿದ್ದೀರಿ?

ನಾವು ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದೇವೆ. ತೆನಾಲಿರಾಮ, ಮಹಾಭಾರತ, ಪಂಚತಂತ್ರದ ಕಥೆಗಳೆಲ್ಲ ಆಗಲೇ ಮಾರುಕಟ್ಟೆಯಲ್ಲಿವೆ. ಇವೆಲ್ಲ ಕೆಲಸ ಇಲ್ಲದಂಥವು. ಇವುಗಳಿಗೆ ಗೌರವಧನ ಕೊಡಬೇಕಿಲ್ಲ, ಚಿತ್ರ ಬರೆಸಬೇಕಿಲ್ಲ.

ನಾವು ಅಂಥದ್ದೇನೂ ಮಾಡಲಿಲ್ಲ. ಮಕ್ಕಳಿಗೆ ಬೇರೆ ರೀತಿಯದನ್ನು ಕೊಡಬೇಕು ಎಂದು ಪೂರಕ ಪಠ್ಯಗಳನ್ನು ಸಮಾಜ ವಿಜ್ಞಾನ, ಜ್ಞಾನಗಳನ್ನು, ವೈಜ್ಞಾನಿಕ ಕಥೆಗಳನ್ನು, ಮಕ್ಕಳ ಪದ್ಯಗಳನ್ನು ಬರೆಸಿ ಪ್ರಕಟಿಸಿದೆವು. ಮಕ್ಕಳಿಗೆ ತಿಳಿವಳಿಕೆ ಕೊಡುವಂಥ ಸಾಮಾಜಿಕ, ಪರಿಸರದ ಕಥೆಗಳನ್ನೂ ಪ್ರಕಟಿಸಿದ್ದೇವೆ. ಕೆಲವು ಪುಸ್ತಕಗಳು ಎರಡರಿಂದ ಎಂಟು ಮುದ್ರಣಗಳನ್ನು ಕಂಡಿವೆ. ಮಕ್ಕಳ ಪುಸ್ತಕ ಬರೆಸಲು ನಾವು ಕಾರ್ಯಾಗಾರವನ್ನೂ ಮಾಡಿದ್ದೇವೆ. ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ವಿಜ್ಞಾನದ ತಾಂತ್ರಿಕ ಪದಗಳನ್ನು ಹೇಳದೆ ತಿಳಿಸುವ ಪ್ರಯತ್ನ ಮಾಡಿದ್ದೇವೆ.

* ಇವುಗಳೊಂದಿಗೆ ಯಾವ ಪುಸ್ತಕಗಳನ್ನು ಹೆಚ್ಚಾಗಿ ಪ್ರಕಟಿಸಿದ್ದೀರಿ?

ನಾವು ಅತಿಹೆಚ್ಚು ಆರೋಗ್ಯ, ವೈದ್ಯಕೀಯ ಪುಸ್ತಕಗಳನ್ನು ತಂದಿದ್ದೇವೆ. ಎಲ್ಲ ವಿಶ್ವವಿದ್ಯಾಲಯದವರು ವಿಫಲರಾದರೂ ನಾವು ಈ ವಿಷಯಗಳ ಪುಸ್ತಕಗಳನ್ನು ತಂದಿದ್ದೇವೆ. ನಾವು ತಂದವುಗಳಲ್ಲಿ ಕೆಲವು 18 ಮುದ್ರಣವನ್ನೂ ಕಂಡಿವೆ. ಇವನ್ನು ಮಾರಿದ್ದು ಮಾತ್ರವಲ್ಲ ಇದರ ಪ್ರಚಾರದ ಕೆಲಸವನ್ನೂ ಮಾಡಿದೆವು. 2003ರಲ್ಲಿ ವೈದ್ಯ ಸಾಹಿತ್ಯ ಪ್ರಚಾರ ಆಂದೋಲನವನ್ನು ಮಾಡಿದ್ದೇವೆ. ಕನ್ನಡದಲ್ಲಿ ಬಂದ ವೈದ್ಯ ಸಾಹಿತ್ಯದ ಲೆಕ್ಕವನ್ನು ಹಾಕಿದಾಗ 500 ಪುಸ್ತಕಗಳು ಬಂದದ್ದು ಗೊತ್ತಾಯಿತು. ಬೆಂಗಳೂರಿನ 25 ಆಸ್ಪತ್ರೆಗಳಲ್ಲಿ ಒಂದು ಆಸ್ಪತ್ರೆಯಲ್ಲಿ ಐದು ದಿನಗಳಂತೆ 125 ದಿನ ಈ ಪುಸ್ತಕಗಳ ಪ್ರದರ್ಶನವನ್ನು ನಡೆಸಿದೆವು. ಇದಕ್ಕೆ ಪ್ರತಿಕ್ರಿಯೆ ಹೇಗಿತ್ತು ಎಂದರೆ ಆ ರಂಗದಲ್ಲಿ ಇದ್ದವರಿಗೇ ಇಷ್ಟು ಪುಸ್ತಕ ಬಂದದ್ದು ಗೊತ್ತಿರಲಿಲ್ಲ!

* ಪುಸ್ತಕದ ಮಾರಾಟ, ಪ್ರದರ್ಶನ, ಹಸ್ತಪ್ರತಿಯ ಆಯ್ಕೆ ಹೇಗೆ? ವರ್ಷಕ್ಕೆ ಪ್ರಕಟವಾಗುವ ಒಟ್ಟೂ ಪುಸ್ತಕಗಳು ಎಷ್ಟು? ಮಾರಾಟ ಎಷ್ಟಾಗುತ್ತದೆ?

ಮೊದಲಿಗೆ ನಾನೇ ಪುಸ್ತಕ ಪ್ರದರ್ಶನ, ಮಾರಾಟಕ್ಕೆ ಹೋಗುತ್ತಿದ್ದೆ. ಈಗ ಎಂಟು ತಂಡಗಳು ಪ್ರದರ್ಶನದ ಕೆಲಸ ಮಾಡುತ್ತವೆ. 365 ದಿನವೂ ಪ್ರದರ್ಶನ, ಮಾರಾಟ ತಾಲೂಕು ಮಟ್ಟದಲ್ಲೂ ಇರುತ್ತದೆ. ಮೈಸೂರು, ಗುಲ್ಬರ್ಗಾ, ಮಂಗಳೂರುಗಳಲ್ಲಿ ನಮ್ಮ ಮಳಿಗೆಗಳಿವೆ. ಕನ್ನಡದಲ್ಲಿ ಸ್ವಂತ ಮುದ್ರಣ, ಮಾರಾಟಜಾಲ ಇರುವ ಪ್ರಕಾಶನ ಸಂಸ್ಥೆಯೆಂದರೆ ನಮ್ಮದೊಂದೇ. ನಮ್ಮಲ್ಲಿನ ಸಮಾಲೋಚಕ ಮಂಡಳಿ ಹಸ್ತಪ್ರತಿಯನ್ನು ಪರಿಶೀಲಿಸಿ ಆಯ್ಕೆ ಮಾಡುತ್ತದೆ. ಕಳೆದ ಒಂದು ವರ್ಷದಲ್ಲಿ 150 ಹೊಸ ಶೀರ್ಷಿಕೆಗಳ, 250 ಮರುಮುದ್ರಣಗಳ 400 ಪುಸ್ತಕಗಳು ಪ್ರಕಟವಾಗಿವೆ. ಸುಮಾರು ನಾಲ್ಕೂವರೆ ಲಕ್ಷದಷ್ಟು ಪ್ರತಿಗಳನ್ನು ಮುದ್ರಿಸಿದ್ದೇವೆ. ಮೂರು ಕೋಟಿ ರೂಪಾಯಿಗಳ ನಾಲ್ಕು ಲಕ್ಷ ಪ್ರತಿಗಳನ್ನು ಮಾರಿದ್ದೇವೆ. ಪುಸ್ತಕಗಳಿಂದ ಬಂದ ಹಣವನ್ನು ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎಂಬಂತೆ ಪುಸ್ತಕ ಪ್ರಕಟಣೆಗೇ ಹಾಕುತ್ತೇವೆ. ನಮ್ಮಲ್ಲಿ ಅತಿಹೆಚ್ಚು ಮಾರಾಟವಾಗುವ ಲೇಖಕರೆಂದರೆ ಡಾ. ಸಿ.ಆರ್. ಚಂದ್ರಶೇಖರ್. ಅವರ ನೂರು ಶೀರ್ಷಿಕೆಗಳ ಸುಮಾರು ಐದು ಲಕ್ಷದಷ್ಟು ಪ್ರತಿಗಳು ಮಾರಾಟವಾಗಿವೆ. ನಾವು ಸರ್ಕಾರದ ಸಗಟು ಖರೀದಿಯ ಮೇಲೆ ಹೆಚ್ಚು ಅವಲಂಬಿತರಾಗಿಲ್ಲ. ಇದಕ್ಕಾಗಿ ವಿಧಾನಸೌಧದ ಕಂಬಗಳನ್ನು ಸುತ್ತಿಲ್ಲ. ಒಂದು ಉದಾಹರಣೆ ಕೊಡುವುದಾದರೆ ನಾವು ‘ಜ್ಞಾನ ವಿಜ್ಞಾನ ಕೋಶ’ವನ್ನು ಮಾಡುತ್ತೇವೆ ಎಂದು ಪ್ರಕಟಿಸಿದಾಗ ಕೆಲವರು ಇವರಿಗೆ ಹುಚ್ಚು ಹಿಡಿದಿದೆ ಎಂದರು. ಆದರೆ, 3300 ಜನರು ಪ್ರಕಟಣಾಪೂರ್ವ ಪ್ರತಿಗಳಿಗೆ ನೋಂದಾಯಿಸಿದರು. ನಾವು 11 ತಿಂಗಳಿನಲ್ಲಿ ಐದು ಸಾವಿರ ಪ್ರತಿಗಳನ್ನು ಮಾರಿದೆವು.

* ನವಕರ್ನಾಟಕ ಅನೇಕ ಪ್ರಥಮಗಳನ್ನು ಪ್ರಕಾಶನ ರಂಗದಲ್ಲಿ ಮಾಡಿದೆ…

ಜ್ಞಾನ ವಿಜ್ಞಾನ ಕೋಶ ಇಂಥದ್ದೊಂದು ಪ್ರಯತ್ನ. ವಿಶ್ವಕಥಾಕೋಶವನ್ನು ನಿರಂಜನರ ಸಂಪಾದಕತ್ವದಲ್ಲಿ 85 ದೇಶ, ಪ್ರದೇಶಗಳ 340 ಕಥೆಗಳನ್ನು 25 ಸಂಪುಟಗಳಲ್ಲಿ ಪ್ರಕಟಿಸಿದೆವು. ಆಗ ಐದು ಸಾವಿರ ಪುಟಗಳನ್ನು 200 ರೂಪಾಯಿಗಳಿಗೆ ಕೊಟ್ಟೆವು. ಇದು ಬೇರೆ ಭಾಷೆಯಲ್ಲಿ ನಡೆದಿಲ್ಲ. ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕನ್ನಡ ಲೇಖಕರ ಮಾಲೆಯನ್ನು ನಾವು ಪ್ರಕಟಿಸುತ್ತಿದ್ದೇವೆ. ಪ್ರಧಾನ ಗುರುದತ್, ಹಾ.ಮಾ.ನಾಯಕ ಇದರ ಸಂಪಾದಕರಾಗಿದ್ದರು. ಈಗ  ಪ್ರಧಾನ ಗುರುದತ್ ಸಂಪಾದಕರಾಗಿದ್ದಾರೆ. ಈವರೆಗೆ 44 ಲೇಖಕರ ಪುಸ್ತಕಗಳನ್ನು ತಂದಿದ್ದೇವೆ. ಇದು ಭಾರತದಲ್ಲೇ ಪ್ರಥಮ. ಇದೇ ಸಾಲಿನಲ್ಲಿ ವಿಜ್ಞಾನ ಪದ ವಿವರಣಾ ಕೋಶವೂ ಉಲ್ಲೇಖಾರ್ಹ.

* ನಿಮ್ಮಲ್ಲಿ ಕಥಾ ಸಾಹಿತ್ಯ ಕಡಿಮೆ. ಈಚೆಗೆ ಎಡಪಂಥೀಯ ಸಾಹಿತ್ಯವೂ ಕಡಿಮೆ ಅನಿಸುತ್ತಿಲ್ಲವೆ?

ಕಥಾ ಸಾಹಿತ್ಯದಲ್ಲಿ ನಮ್ಮದೇ ಆಯ್ಕೆಗಳಿವೆ. ಜನರೂ ಕೂಡ ವಿಜ್ಞಾನ, ವಿಚಾರ ಸಾಹಿತ್ಯ ಎಂದು ನಮ್ಮನ್ನು ಗುರುತಿಸುತ್ತ, ಓದುತ್ತ ಬಂದಿದ್ದಾರೆ. ಕಥಾಸಾಹಿತ್ಯವನ್ನು ಪ್ರಕಟಿಸುವವರು ಬೇರೆ ಇದ್ದಾರೆ, ವಿಚಾರ ಸಾಹಿತ್ಯವನ್ನು ಪ್ರಕಟಿಸುವ ನೀವು ಇದನ್ನೇ ಪ್ರಕಟಿಸಿ ಎನ್ನುತ್ತಾರೆ. ನಾವು ಮೊಟ್ಟಮೊದಲಿಗೆ ಮರಾಠಿ ದಲಿತ ಆತ್ಮಕಥೆಗಳನ್ನು ಕನ್ನಡಕ್ಕೆ ತಂದಿದ್ದೇವೆ. ಮಲೆಯಾಳಂನ ಹತ್ತು ಲೇಖಕಿಯರ ಕಥೆಗಳನ್ನು ಕನ್ನಡಕ್ಕೆ ತಂದೆವು. ಅದು ನಮ್ಮ ಲೇಖಕಿಯರನ್ನು ಪ್ರಭಾವಿಸಲಿಲ್ಲ. ಇನ್ನು, ಎಡಪಂಥೀಯ ಸಾಹಿತ್ಯವಷ್ಟೇ ಈ ಮೊದಲು ಬರುತ್ತಿದ್ದರಿಂದ ಅದನ್ನೇ ಹೆಚ್ಚಾಗಿ ಪ್ರಕಟಿಸಿದ್ದು ಎದ್ದು ಕಾಣುತ್ತಿತ್ತು. ಸೋವಿಯತ್ ಯೂನಿಯನ್‌ನ ರಾದುಗ, ಪ್ರಗತಿ, ಮೀರ ಪ್ರಕಾಶನದ ಸಹಯೋಗದಿಂದ ಅವನ್ನು ತರುತ್ತಿದ್ದೆವು. ಈಗಲೂ ಅದು ಬರುತ್ತಿದೆ.

* ಪ್ರಕಟಣೆಗಳ ಸಂದರ್ಭದಲ್ಲಿ ಬೇಸರ ಉಂಟುಮಾಡುವ ಘಟನೆ?

ನಾವು ಕರ್ನಾಟಕ ಏಕೀಕರಣದ 40ನೇ ವಾರ್ಷಿಕೋತ್ಸವ (1996)ದ ಸಂದರ್ಭದಲ್ಲಿ `ಕರ್ನಾಟಕ ಏಕೀಕರಣ ಇತಿಹಾಸ’ ಪುಸ್ತಕವನ್ನು ಪ್ರಕಟಿಸಿದೆವು. ಆಗ ಜೀವಂತರಾಗಿದ್ದ 33 ಹೋರಾಟಗಾರರ ಸಂದರ್ಶನ ಮಾಡಿದ್ದೆವು. 100 ವರ್ಷಗಳ ಹಿಂದಿನ ಪತ್ರಿಕೆಗಳನ್ನು ಸಂಪಾದನೆ ಮಾಡಿದ್ದೆವು. ಅದರಲ್ಲಿ 139 ಜನರ ಚಿತ್ರಗಳು, ರೇಖಾಚಿತ್ರಗಳು ಇದ್ದವು. ಇದೇ ಪುಸ್ತಕವನ್ನು ಆಧರಿಸಿ ಕರ್ನಾಟಕ ಸುವರ್ಣಮಹೋತ್ಸವದ ಸಂದರ್ಭದಲ್ಲಿ 26 ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಯಿತು. ಇದರ ಮಹತ್ವವನ್ನು ಮನಗಂಡ ಸರ್ಕಾರ ಪುಸ್ತಕದ ಎರಡು ಸಾವಿರ ಪ್ರತಿಗಳನ್ನು ಕೊಂಡುಕೊಳ್ಳಿ ಎಂದರೂ ಗ್ರಂಥಾಲಯ ಇಲಾಖೆ ತಾಂತ್ರಿಕ ಕಾರಣ ನೀಡಿ ಆ ಪುಸ್ತಕವನ್ನು ಕೊಂಡುಕೊಳ್ಳಲಿಲ್ಲ. ಗ್ರಂಥಾಲಯ ಇಲಾಖೆಯ ಅಧಿಕಾರಿಗಳು ಪುಸ್ತಕದ ಅವಧಿ ಮೀರಿದ್ದನ್ನು ನೋಡಿದರೇ ಹೊರತು ಒಂದು ಪುಸ್ತಕದ ಜೀವಂತಿಕೆಯನ್ನಲ್ಲ. ಪುಸ್ತಕಗಳು ಎಂದಿಗೂ ಸಾಯುವುದಿಲ್ಲ, ಕೈಯಿಂದ ಕೈಗೆ ದಾಟುತ್ತ ಉಸಿರಾಡುತ್ತಲೇ ಇರುತ್ತವೆ.

ಕೃಪೆ : ಪ್ರಜಾವಾಣಿ