ಇತಿಹಾಸದ ಯಥಾವತ್ ಘಟನೆಗಿಂತ ದಲಿತರ ಸಂಕಟದ ಸ್ಫೋಟ ಇದೆ

scan0036

ಕಥೆ, ನಾಟಕ, ಚಿತ್ರಕಲೆಯ ಬಹುರೂಪಿ ಚೌಗಲೆ ಅವರು ಅನುವಾದ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಮರಾಠಿಯ ಹಲವು ಪ್ರಮುಖ ನಾಟಕಗಳನ್ನು ಅವು ಕನ್ನಡದ್ದೇ ಸ್ವಂತ ಕೃತಿ ಎನಿಸುವಷ್ಟು ಸಮರ್ಥವಾಗಿ ರೂಪಾಂತರಿಸಿದ್ದಾರೆ. ನಾಟಕ ಕ್ಷೇತ್ರದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಚೌಗಲೆ ಅವರ ಸಣ್ಣ ಕಥೆ ಆಧರಿಸಿ ಮತ್ತೊಬ್ಬ ನಟ, ನಿರ್ದೇಶಕ, ಲೇಖಕ ಶಿರೀಷ ಜೋಷಿ `ಬೆಸುಗೆಗೊಳ್ಳದ ಹಳಿಗಳುಎಂಬ ನಾಟಕವಾಗಿಸಿದ್ದಾರೆ. ನಾಟಕದ ಶೀರ್ಷಿಕೆ `ಬೆಸುಗೆಗೊಳ್ಳದ …ಎಂದಿದ್ದರೂ ಈ ಇಬ್ಬರು ಪ್ರತಿಭಾವಂತರ ಜುಗಲ್ ಬಂದಿಯಿಂದಾಗಿ ನಾಟಕ ಬಿಗಿಯಾದ ಬಂಧದಿಂದ ಸುಮಧುರವಾಗಿ ಬೆಸುಗೆಗೊಂಡಿದೆ. ಹಲವು ಪ್ರಯೋಗವನ್ನೂ ಕಂಡಿದೆ. ನಾಟಕದ ಯಶಸ್ಸಿರುವುದೇ ಅದರ ಪ್ರಯೋಗದಲ್ಲೇ.

ಚೌಗಲೆ ಅನುವಾದಿಸಿರುವ ಗಾಂಧಿ-ಅಂಬೇಡ್ಕರ್ ನಾಟಕದಲ್ಲಿ ವಿದೂಷಕ ಸೇರಿ ಮೂರೇ ಪಾತ್ರಗಳು. ವಿದೂಷಕ ಇಬ್ಬರನ್ನೂ ಪ್ರಶ್ನಿಸುತ್ತಾನೆ, ಕೆಣಕುತ್ತಾನೆ, ಪ್ರತಿಕ್ರಯಿಸುತ್ತಾನೆ. ಈ ಸಂಭಾಷಣೆಯಲ್ಲಿ ಅರ್ಧ ಶತಮಾನದ ಭಾರತದ ಚರಿತ್ರೆ ಇದೆ. ಸ್ವಾತಂತ್ರ್ಯ ಹೋರಾಟ ಇದೆ. ಜಾತಿ, ಅಸ್ಪೃಶ್ಯತೆ ನಿವಾರಣೆ ಹೇಗೆಂಬ ಸೈದ್ಧಾಂತಿಕ ಸಂಘರ್ಷ ಇದೆ. ಗಾಂಧಿಯನ್ನು ತುಸು ಹೆಚ್ಚಾಗಿಯೇ ಅಂಬೇಡ್ಕರ್ ಚುಚ್ಚಿದರೂ ಅಲ್ಲಿ ಇತಿಹಾಸದ ಯಥಾವತ್ ಘಟನೆಗಿಂತ ದಲಿತರ ಸಂಕಟದ ಸ್ಫೋಟ ಇದೆ. ನಿರ್ದೇಶಕನಿಗೆ ದೊಡ್ಡ ಸವಾಲು ಒಡ್ಡುವ ನಾಟಕ ಇದು. ಚೌಗಲೆ ಅವರು ನಾಟಕವನ್ನು ಅನುವಾದಿಸಿ ಕೈತೊಳೆದುಕೊಳ್ಳುವುದಿಲ್ಲ. ಅದರ ಪ್ರಯೋಗಕ್ಕೆ ನಿರ್ದೇಶಕರನ್ನು ಪ್ರೀತಿಯಿಂದ ಒತ್ತಾಯಿಸುತ್ತಾರೆ. ಅದಕ್ಕಾಗಿ ನಾಡಿನ ಹಲವೆಡೆ ಓಡಾಡುತ್ತಾರೆ. ಇದು ಸೃಜನಶೀಲತೆಯ ಮುಂದುವರಿಕೆ. ನಾಟಕಕ್ಕೆ ಇದು ತುಂಬಾ ಅಗತ್ಯ.

ಶೀರ್ಷಿಕೆ: ಬೆಸುಗೆಗೊಳ್ಳದ ಹಳಿಗಳು ಲೇಖಕರು: ಕಥೆ:ಡಿ.ಎಸ್.ಚೌಗಲೆ ರಂಗರೂಪ:ಶಿರೀಷ ಜೋಷಿ ಪ್ರಕಾಶಕರು: ಪುಟಗಳು : 60 ಬೆಲೆ: ರೂ.30/-

ಶೀರ್ಷಿಕೆ: ಗಾಂಧಿಅಂಬೇಡ್ಕರ ಲೇಖಕರು: ಪ್ರೇಮಾನಂದ ಗಜ್ವಿ ಅನು:ಡಿ.ಎಸ್.ಚೌಗಲ ಪ್ರಕಾಶಕರು: ಪುಟಗಳು : 106 ಬೆಲೆ: ರೂ.60/-

ಕೃಪೆ : ಸುಧಾ