ಕಿರಿದರಲ್ಲಿ ಹಿರಿದರ್ಥ ನೀಡುವ ಬಣ್ಣದ ಬುಗುರಿ

ಬಿ.ಎಂ.ಹನೀಫ್ ಅವರು 32 ವಾರಗಳ ಕಾಲ ಬರೆದ ಅಂಕಣ ಬರಹಗಳ ಸಂಕಲನವಿದು. ನಿರ್ದಿಷ್ಟ ವೇಳೆಗೆ ನಿರ್ದಿಷ್ಟವಾದ ಲೇಖನವನ್ನು ಬರೆಯುವುದು ಕಷ್ಟವಾದರೂ ಸೃಜನಶೀಲ ಗುಣಕ್ಕೆ ಊನಬಾರದಂತೆ ಜಗತ್ತಿನ ಹಲವು ಸಮಸ್ಯೆಗಳನ್ನು ಅನಾವರಣಗೊಳಿಸುವ ಪ್ರಯತ್ನದಲ್ಲಿ ಲೇಖಕರು ಯಶಸ್ಸನ್ನು ಕಂಡಿದ್ದಾರೆ. `ಮಧ್ಯಮರ ಸಂಸ್ಕೃತಿ, ಅಲಕ್ಷಿತ ಸಂಸ್ಕೃತಿ, ಇಸ್ಲಾಂ ಸಂವೇದನೆ, ಆಹಾರ ಪದ್ಧತಿ, ಸೌಂದರ್ಯ, ಭಾಷಾ ಸಮಸ್ಯೆ, ಜಾತಿ, ಧರ್ಮ, ಮತಾಂತರ ಮುಂತಾದ ಸಮಾಜ ಸರ್ವಮುಖಗಳೂ ಇಲ್ಲಿ ವಿಶ್ಲೇಷಣೆಗೊಳಪಟ್ಟಿವೆ.

ಪ್ರಾದೇಶಿಕ ಸಂಸ್ಕೃತಿಯ ಚಹರೆಗಳನ್ನು ನಿರ್ವಚಿಸುತ್ತಲೇ ಸಮಸ್ಯೆಗಳ ಪರಿಹಾರದತ್ತ ಗಮನ ಸೆಳೆಯುವ ಪ್ರಸ್ತುತ ಬರಹಗಳು ಕೆಲವು ಪತ್ರದ ಮಾದರಿಯಲ್ಲಿದ್ದರೆ ಇನ್ನು ಕೆಲವು ಲೇಖನದ ಸ್ವರೂಪದಲ್ಲಿವೆ. ಕಥೆಯ ಧಾಟಿಯಲ್ಲಿ ನಮ್ಮ ನಡುವಿನ ಸಮಸ್ಯೆಗಳನ್ನು ಬಿಚ್ಚಿಡುವುದರಿಂದ ತೀರಾ ಆಪ್ತವೆವಿಸುತ್ತವೆ. ಸಮಾಜದ ವಿಭಿನ್ನ ವರ್ಗಗಳ ಶೋಚನೀಯ ಸ್ಥಿತಿಯನ್ನ ನಿರೂಪಿಸುವಾಗ ದುಡಿಯುವ ವರ್ಗದ ಸಂಕಷ್ಟಗಳನ್ನ ಗುರುತಿಸುವ ಮಾರ್ಗವೇ ಹೆಚ್ಚು ಗ್ರಹೀತವಾಗುತ್ತದೆ. ಜಾಗತೀಕರಣದ ಯುಗದಲ್ಲಿ ಅಸಂಘಟಿತ ಹೆಣ್ಣುಮಕ್ಕಳ ಬಡತನದ ಬಗ್ಗೆ ಕಾಳಜಿವಹಿಸುತ್ತಿಲ್ಲವೆಂಬ ವಿಷಾದದೊಂದಿಗೆ ಸಾಮಾನ್ಯ ಪೇದೆಗಳ ಆರ್ಥಿಕ ದುಃಸ್ಥಿತಿಯ ಚಿತ್ರವನ್ನು ಕಟ್ಟಿಕೊಡಲು ಮರೆಯುವುದಿಲ್ಲ. ಬದಲಾಗಿರುವ ಜೀವನಶೈಲಿಯ ಸಂದರ್ಭದಲ್ಲಿ ಮನುಷ್ಯನ ಹಲವಾರು ಬಿಕ್ಕಟ್ಟುಗಳನ್ನು ಮತಧರ್ಮಕೇಂದ್ರಿತ ಬರಹಗಳಲ್ಲಿ ಚರ್ಚಗೆ ಎತ್ತಿಕೊಳ್ಳಲಾಗಿದೆ.

ಸುಮಾ, ಅಮೀರ್ ಖಾನ್, ಅಭಿಷೇಕ್ ಬಚ್ಚನ್ – ಕುರಿತಾದ ಬರಹಗಳು ವ್ಯಕ್ತಿಕೇಂದ್ರಿತವೆನಿಸಿದರೂ ತತ್ ಸಂಬಂಧವಾದ ಸಮಸ್ಯೆಗಳ ಜಾಡಿನಲ್ಲೇ ಸಾಗುವುದರಿಂದ ಪ್ರಬಂಧಗಳಿಗೆ ಬೇರೊಂದು ಆಯಾಮವೆ ಪ್ರಾಪ್ತವಾಗಿದೆ. ಸಾರ್ವತ್ರಿಕಗೊಳಿಸುವ ಪ್ರತಿಭೆಯಿಂದಾಗಿ ಇವು ಕಥೆ, ಪ್ರಬಂಧ, ಇಲ್ಲವೇ ಕ್ಷೇತ್ರಕಾರ್ಯದ ಅನುಭವವನ್ನು ನೀಡಬಯಸುತ್ತವೆ.

ಇಲ್ಲಿ ಕೆಲವು ಸಂಗತಿಗಳು ಹೊಸವಲ್ಲದಿದ್ದರೂ ಅವು ಪಡೆದುಕೊಳ್ಳುವ ತಿರುವು ಮಾತ್ರ ನೂತನವಾದುದು. ನಿರೂಪಣೆ ಸರಳವೆನಿಸಿದರೂ ಒಳಗೊಳ್ಳುವ ವಿಷಯ ಮಾತ್ರ ತೀರಾ ಗಂಭೀರ. ಸಮಸ್ಯೆಗಳ ತಡಕಾಟದಲ್ಲಿ ಶೋಧಕನ ದೃಷ್ಟಿಯೊಂದಿಗೆ ಮಾನವಪರ ಧೋರಣೆಯನ್ನು ಗುರುತಿಸಬಹುದು. ವಿಷಯಗಳಿಗೆ ಲಗ್ಗೆ ಹಾಕುವಾಗ ಸಾಹಿತ್ಯ ಮತ್ತು ಚರಿತ್ರೆ ಸಂದರ್ಭಚಿತ ಆಕಾರವಾಗಿ ಬಳಕೆಗೊಳ್ಳುತ್ತವೆ. ಸೂಫಿ ಸಂತರು, ಬೀಚಿ, ದಿನಕರ ದೇಸಾಯಿ, ಯಯಾತಿ – ಮುಂತಾದವರನ್ನು, ತಾಜಮಹಲಿನ ನೆಪದಲ್ಲಿ ಅಂತರಧರ್ಮಯ ವಿವಾಹ ಸಂಬಂಧಗಳನ್ನು, ನಗೆಹಬ್ಬದ ನೆಪದಲ್ಲಿ ಮನುಷ್ಯನ ಸಿನಿಕತನ ಇತ್ಯಾದಿಗಳನ್ನು ಗಮನಿಸಿದರೆ ವರ್ತಮಾನದಲ್ಲಿದ್ದು ಪರಂಪರೆಯನ್ನು ನೆನಪಿಸುವಲ್ಲಿ ಬರಹಗಳು ಸಾಫಲ್ಯ ಹೊಂದುತ್ತವೆ.

ಆತ್ಮಾವಲೋಕನ ಪ್ರವೃತ್ತಿ, ಚಲನಶೀಲ ಗುಣ, ಕಾವ್ಯಾತ್ಮಕವಾದ ಶೀರ್ಷಿಕೆ, ಕಿರಿದರಲ್ಲಿ ಹಿರಿದರ್ಥ ನೀಡುವ ಬಗೆ, ವೈಚಾರಿಕ ದೃಷ್ಟಿ, ಅರವಿಂದ ಮಾಲಗತ್ತಿಯವರು ಮುನ್ನುಡಿಯಲ್ಲಿ ಹೇಳಿರುವಂತೆ ಸಂಕಥನದ ಮಾದರಿಯನ್ನು ಅನುಸರಿಸುವ ರೀತಿ-ಈ ಎಲ್ಲದರಿಂದಲೂ `ಬಣ್ಣದ ಬುಗುರಿಯ ಬರಹಗಳು ವೈವಿಧ್ಯಮಯ ಬದುಕಿನ ಅನುಸಂಧಾನ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಜಾಗತೀಕರಣದ ದಿನಗಳಲ್ಲಿ ನಮ್ಮ ಸಾಹಿತ್ಯದ ಮಾದರಿಗಳು ಪಡೆದುಕೊಳ್ಳುವ ಸ್ವರೂಪ ಯಾವುದಾಗಿರಬೇಕು ಎಂಬುದರತ್ತಲೂ ಪರೋಕ್ಷವಾಗಿ ಇವು ಸೂಚನೆ ನೀಡುವಂತಿರಬೇಕು.

ಡಾ. ಜಿ.ಆರ್. ತಿಪ್ಪೇಸ್ವಾಮಿ

ಶೀರ್ಷಿಕೆ : ಬಣ್ಣದ ಬುಗುರಿ ಲೇಖಕರು : ಬಿ. ಎಂ. ಹನೀಫ್ ಪ್ರಕಾಶಕರು : ಸಂವಹನ ಪುಟಗಳು : 140 ಬೆಲೆ: ರೂ. 105/-

ಕೃಪೆ : ಪ್ರಜಾವಾಣಿ