ರಾಷ್ಟ್ರೀಯವಾದದ ಅರ್ಥ ಹುಡುಕುತ್ತಾ

ಸರಕಾರವೊಂದು ತನ್ನನ್ನು ’ರಾಷ್ಟ್ರ’ದೊಂದಿಗೆ ಸಮೀಕರಿಸಿಕೊಂಡು, ತನ್ನ ಟೀಕಾಕಾರರನ್ನು, ಭಿನ್ನಮತೀಯರನ್ನು ’ರಾಷ್ಟ್ರ-ವಿರೋಧಿ’ ಎಂದು ಕರೆಯುವುದು ಜರೆಯುವುದು ಜಗತ್ತಿನಲ್ಲಾಗಲಿ ಭಾರತದಲ್ಲಾಗಲಿ ಹೊಸದೇನಲ್ಲ. ಅಂತಹವರ ಮೇಲೆ ’ದೇಶದ್ರೋಹ’ದ ಕೇಸು ದಾಖಲಿಸಿ ಬಂಧಿಸುವುದೂ ಹೊಸದಲ್ಲ. ಆದರೆ ಫೆಬ್ರವರಿ ೯, ೨೦೧೬ರಂದು ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘದ ಚುನಾಯಿತ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ನನ್ನು ಮತ್ತಿತರ ವಿದ್ಯಾರ್ಥಿಗಳನ್ನು ’ದೇಶದ್ರೋಹ’ದ ಕೇಸು ಹಾಕಿ ಬಂಧಿಸಿದ್ದು ಒಂದು ಹೊಸ ಟ್ರೆಂಡಿನ ಆರಂಭವಾಗಿತ್ತು. ದೇಶವ್ಯಾಪಿಯಾಗಿ ಉನ್ನತ ಶಿಕ್ಷಣದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ವೆಚ್ಚ ಏರಿಸುವ, ಅದನ್ನು ಬಡ ವಿದ್ಯಾರ್ಥಿಗಳಿಗೆ ನಿಲುಕದಂತೆ ಮಾಡುವ, ಅಲ್ಲಿನ ಕ್ಯಾಂಪಸ್ ಪ್ರಜಾಪ್ರಭುತ್ವವನ್ನು ಕೊನೆಗೊಳಿಸುವ ನೀತಿಗಳ ಜಾರಿ, ಅದನ್ನು ವಿರೋಧಿಸಿದ ಅದಕ್ಕೆ ಪ್ರತಿರೋಧ ಒಡ್ಡಿದ ವಿದ್ಯಾರ್ಥಿ ನಾಯಕರು ಹಾಗೂ ವಿದ್ಯಾರ್ಥಿಗಳ ಮೇಲೆ ಮತ್ತು ಜತೆಗೆ ಎಲ್ಲಾ ರಾಜಕೀಯ ವಿರೋಧಿಗಳ ಮೇಲೆ ’ದೇಶ-ವಿರೋಧಿ’, ’ದೇಶ-ದ್ರೋಹಿ’ ಎಂದು ವ್ಯಾಪಕವಾಗಿ ಅಪಪ್ರಚಾರ ಮಾಡುವುದು, ಖಾಸಗಿ ಸಶಸ್ತ್ರ ಗ್ಯಾಂಗುಗಳು ಅವರ ಮೇಲೆ ದಾಳಿ-ಹಿಂಸಾಚಾರಗಳನ್ನು ಎಸಗುವುದು ಈ ಹೊಸ ಟ್ರೆಂಡಿನ ಮುಖ್ಯ ಗುಣಗಳಾಗಿದ್ದವು. ಜೆಎನ್‌ಯು ಮತ್ತಿತರ ಉನ್ನತ ಶಿಕ್ಷಣಗಳ ಮೇಲೆ ಡಿಸೆಂಬರ್ ೨೦೧೯ರಿಂದ ನಡೆದ ಇನ್ನೊಂದು ಸುತ್ತಿನ ದಾಳಿ ಇನ್ನಷ್ಟು ತೀವ್ರವಾಗಿದ್ದು, ಇದು ತಾರಕಕ್ಕೆ ಮುಟ್ಟಿದೆ.

೨೦೧೬ರಿಂದಲೂ ಇದಕ್ಕೆ ಪ್ರತಿರೋಧವೂ ಬೆಳೆಯುತ್ತಾ ಬಂದಿದೆ ಮತ್ತು ಅದು ಹೆಚ್ಚೆಚ್ಚು ವ್ಯಾಪ್ತಿ ಹಾಗೂ ಆಳಗಳನ್ನು ಪಡೆಯುತ್ತಿದೆ. ಈ ಟ್ರೆಂಡ್ ಒಂದು ಹೊಸ ಸಕಾರಾತ್ಮಕ ಸಂಗತಿಯನ್ನು ಹುಟ್ಟು ಹಾಕಿತ್ತು.  ದೇಶ/ರಾಷ್ಟ್ರವೆಂದರೇನು? ರಾಷ್ಟ್ರವಾದ ಎಂದರೇನು? ರಾಷ್ಟ್ರವಾದದ ಹಲವು ವಿಧಗಳಿವೆಯೆ? ಇದ್ದರೆ ’ಸರಿಯಾದ’ ರಾಷ್ಟ್ರವಾದವನ್ನು ನಿರ್ಧರಿಸುವವರು ಯಾರು? ಒಂದು ಪ್ರದೇಶದ ಅಥವಾ ಒಂದು ಜನವಿಭಾಗದ ಜನರು ತಮ್ಮ ಆಶೋತ್ತರಗಳು ಈಡೇರದಿದ್ದಾಗ ಅಥವಾ ದಮನಕ್ಕೊಳಗಾದಾಗ ಅವರು ಆಳುವವರ ಪ್ರಭುತ್ವದ ಅಧಿಕೃತ ’ರಾಷ್ಟ್ರವಾದ’ವನ್ನು ಪ್ರಶ್ನಿಸುವುದು, ಅದಕ್ಕೆ ಬದಲಿ ಪ್ರಸ್ತಾವಿಸುವುದು ತಪ್ಪೆ? ’ದೇಶದ್ರೋಹ’ವೇ? ೨೦೧೬ರ ಜೆಎನ್‌ಯು ಮೇಲೆ ದಾಳಿಯ ಸಂದರ್ಭದಲ್ಲೇ ಈ ಪ್ರಶ್ನೆಗಳು ಜೆಎನ್‌ಯು ನ ಒಳಗೂ ಹೊರಗೂ ತೀವ್ರ ಚರ್ಚೆಗೆ ಒಳಗಾದವು. ಇದಕ್ಕೆ ಉತ್ತರ ಹುಡುಕುವ ಭಾಗವಾಗಿ ಜೆಎನ್‌ಯು ಅಧ್ಯಾಪಕರ ಸಂಘ ಜೆಎನ್‌ಯು ಆಡಳಿತ ಬ್ಲಾಕಿನ ಅಂಗಳದಲ್ಲಿ ರಾಷ್ಟ್ರವಾದದ ಕುರಿತ ವಿವಿಧ ಜ್ಞಾನಕ್ಷೇತ್ರಗಳ (ಇತಿಹಾಸ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಭಾಷಾಶಾಸ್ತ್ರ ಇತ್ಯಾದಿ) ಹಲವು ಪರಿಣತರಿಂದ ಉಪನ್ಯಾಸ ಮಾಲೆ ಏರ್ಪಡಿಸಿತು. ಸುಮಾರು ಒಂದು ತಿಂಗಳ ಕಾಲ ನಡೆದ ೨೪ ಉಪನ್ಯಾಸಗಳಲ್ಲಿ ರೊಮಿಲಾ ಥಾಪರ್, ಪ್ರಭಾತ್ ಪಟ್ನಾಯಕ್, ಗೋಪಾಲ ಗುರು ರಂತಹ ಪ್ರಸಿದ್ಧ ಜೆಎನ್‌ಯು ಪ್ರಾಧ್ಯಾಪಕರಲ್ಲದೆ, ಅಚಿನ್ ವನೈಕ್, ಜೈರಸ್ ಬಾನಾಜಿ ರಂತಹ ದೇಶ/ವಿದೇಶಗಳ ಪ್ರಸಿದ್ಧ ವಿ.ವಿಗಳ ಪರಿಣತರೂ ಉಪನ್ಯಾಸ ನೀಡಿದರು. ಇದು ೨೦೧೬ರಲ್ಲೇ ಇಂಗ್ಲೀಷಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು.

ರಾಷ್ಟ್ರವಾದದ ಬಗೆಗಿನ ಗಂಭೀರ ಚರ್ಚೆಯನ್ನು ಕರ್ನಾಟಕದಲ್ಲೂ ಆರಂಭಿಸುವ ಅಗತ್ಯ ಹಿಂದೆಂದಿಗಿಂತಲೂ ಈ ಆವಶ್ಯಕವಾಗಿದೆ.

ರಾಷ್ಟ್ರವಾದದ ಬಗೆಗಿನ ವಿವಿಧ ಅಭಿಪ್ರಾಯಗಳ, ಹಲವು ಮಗ್ಗುಲುಗಳಿಂದ ನೋಡುವ, ಹಲವು ಆಯಾಮಗಳನ್ನು ಪ್ರಸ್ತುತಪಡಿಸುವ ಈ ಪುಸ್ತಕ, ಕರ್ನಾಟಕದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಬಹಳ ಉಪಯೋಗಿ ಆಕರ ಗ್ರಂಥವಾಗಬಲ್ಲದು. ರಾಷ್ಟ್ರವಾದದ ಬಗೆಗಿನ ಚರ್ಚೆಯ ಕುರಿತು ಆಸಕ್ತಿ ಇರುವ ಎಲ್ಲರಿಗೂ ಇದೊಂದು ಉತ್ತಮ ಕೈಪಿಡಿ. ಕರ್ನಾಟಕದಲ್ಲಿ ರಾಷ್ಟ್ರವಾದದ ಕುರಿತು ಭಿನ್ನಾಭಿಪ್ರಾಯಗಳನ್ನು ಲಾಠಿ-ಮಚ್ಚುಗಳ ಮತ್ತು ಐಪಿಸಿ ಕಲಮುಗಳ ಭಾಷೆಯಲ್ಲಿ ’ಪರಿಹರಿಸು’ವುದರಿಂದ ಗಂಭೀರ ವಾಗ್ವಾದದತ್ತ ಹೊರಳಿಸುವುದರಲ್ಲಿ ಈ ಪುಸ್ತಕ ನೆರವಾಗಬಲ್ಲದು.

ಶೀರ್ಷಿಕೆ : ಜೆಎನ್ ಯು ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು ಅನುವಾದ : ಬಿ. ಶ್ರೀಪಾದ ಭಟ್ ಪ್ರಕಾಶಕರು : ಕ್ರಿಯಾ ಮಾಧ್ಯಮ ಪ್ರೈ. ಲಿ.      ಪುಟಗಳು : 216 ಬೆಲೆ : ರೂ.180/- ಪ್ರಕಟಣಾ ವರ್ಷ : 2020